ಪುಣೆ: ಭಾರತೀಯ ಸೇವೆಯ ಕಾಲ್ದಳದ ಬತ್ತಳಿಕೆಗೆ ಮತ್ತೊಂದು ಪ್ರಮುಖ ಅಸ್ತ್ರ ಸೇರ್ಪಡೆಯಾಗಿದ್ದು, ಅತ್ಯಾಧುನಿಕ ಬದಲಾವಣೆಗಳೊಂದಿಗೆ 'ಅರ್ಜುನ್ ಮಾರ್ಕ್ 2' ಟ್ಯಾಂಕರ್ ಸಮರಕ್ಕೆ ಸಿದ್ಧವಾಗಿದೆ ಎಂದು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಹೇಳಿದೆ.
ಈ ಹಿಂದೆ ಅರ್ಜುನ್ ಟ್ಯಾಂಕರ್ ಗಳನ್ನು ಅಪ್ ಗ್ರೇಡ್ ಮಾಡಲು ಡಿಆರ್ ಡಿಒ ನಿರ್ಧರಿಸಿತ್ತು. ಅದರಂತೆ ಅರ್ಜುನ್ ಟ್ಯಾಂಕರ್ ನಲ್ಲಿ ಸುಮಾರು 93 ಅತ್ಯಾಧುನಿಕ ಬದಲಾವಣೆಗಳನ್ನು ಮಾಡಲಾಗಿದ್ದು, ಪ್ರಮುಖವಾಗಿ ಸಮರ ಸಂದರ್ಭದಲ್ಲಿ ಶತ್ರುಪಾಳಯದ ಸೇನೆಯನ್ನು ನಾಶ ಮಾಡಬಲ್ಲ ಸಾಮರ್ಥ್ಯವನ್ನು ಅರ್ಜುನ್ ಟ್ಯಾಂಕರ್ ಗೆ ತುಂಬಲಾಗಿದೆ. ಈ ಬಗ್ಗೆ ಸ್ವತಃ ಡಿಆರ್ ಡಿಒದ ಅಧ್ಯಕ್ಷ ಎಸ್ ಕ್ರಿಸ್ಟೋಫರ್ ಅವರು ಮಾಹಿತಿ ನೀಡಿದ್ದು, ಅರ್ಜುನ್ ಮಾರ್ಕ್ 2 ಟ್ಯಾಂಕರ್ ಗೆ ಸುಮಾರು 93 ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಪುಣೆಯಲ್ಲಿ ನಡೆದ ಡಿಆರ್ ಡಿಒ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಸ್ಟೋಫರ್ ಅವರು, ಟ್ಯಾಂಕರ್ ನ ವೇಗವನ್ನು ಹೆಚ್ಚಿಸಲು ಎಂಜಿನ್ ನಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದ್ದು, ಶತ್ರು ಪಾಳಯದ ಟ್ಯಾಂಕರ್ ಗಳನ್ನು ಧ್ವಂಸ ಮಾಡಬಲ್ಲ ಟ್ಯಾಂಕರ್ ವಿರೋಧಿ ಲಾಹತ್ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಂತೆಯೇ ಟ್ಯಾಂಕರ್ ಗೆ ಲೇಸರ್ ಪ್ರೊಟೆಕ್ಷನ್ ಸ್ಯೂಟ್ ಸೇರಿದಂತೆ ಸುಧಾರಿತ ಶಸ್ತ್ರಸಜ್ಜಿತ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ಈ ಟ್ಯಾಂಕರ್ ಗಳ ಪರೀಕ್ಷೆ ನಡೆಯುತ್ತಿದ್ದು, ಬಳಿಕ ಸೇನೆಯ ಅಂಗೀಕಾರಕ್ಕೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. ಸೇನೆಯ ಅನುಮೋದನೆ ದೊರೆತ ಬಳಿಕ 2 ಹಂತಗಳಲ್ಲಿ ಟ್ಯಾಂಕರ್ ಗಳನ್ನು ಸೇನೆಗೆ ಪೂರೈಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅರ್ಜುನ್ ಮಾರ್ಕ್ 2 ವಿಶೇಷತೆಗಳು
1.ಕ್ಷಿಪಣಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಎದುರಾಳಿ ಟ್ಯಾಂಕರ್ ಗಳನ್ನು ಕ್ಷಣ ಮಾತ್ರದಲ್ಲಿ ಧ್ವಂಸ ಮಾಡುತ್ತದೆ.
2.ಸ್ಫೋಟಕ ನಿಗ್ರಹ ರಕ್ಷಾ ಕವಚ ಅಳವಡಿಸಲಾಗಿದ್ದು, ಶುತ್ರಾಪಾಳಯ ಅಡಗಿಸಿಟ್ಟಿರುವ ಬಾಂಬ್ ಗಳು ಸ್ಫೋಟವಾದರೆ ಅವುಗಳಿಂದ ಟ್ಯಾಂಕರ್ ಗೆ ರಕ್ಷಣೆ ನೀಡುತ್ತದೆ.
3.ಟ್ಯಾಂಕರ್ ನಲ್ಲಿ ಆಟೋಮ್ಯಾಟಿಕ್ ಟಾರ್ಗೆಟ್ ಸಿಸ್ಟಂ ಟ್ರ್ಯಾಂಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ಶುತ್ರುಗಳನ್ನು ಗುರುತಿಸಿ ತಾನೇ ಸ್ವಯಂ ಚಾಲಿತ ದಾಳಿ ಮಾಡುತ್ತದೆ.
4.ಟ್ಯಾಂಕರ್ ನಲ್ಲಿ ಅತ್ಯಾಧುನಿಕ ನ್ಯಾವಿಗೇಷನ್ ವ್ಯವಸ್ಥೆ ಅಳವಡಿಸಲಾಗಿದ್ದು, ಇದು ದಾಳಿ ವೇಳೆ ಸ್ಥಳೀಯ ಮಾರ್ಗದ ಮಾಹಿತಿ ನೀಡುತ್ತದೆ.
5.ಡಿಜಿಟಲ್ ತಂತ್ರಜ್ಞಾನ, ಅತ್ಯಾಧುನಿಕ ನಿಯಂತ್ರಕ ವ್ಯವಸ್ಥೆ ಇದ್ದು, ಇದು ಟ್ಯಾಂಕರ್ ನಿರ್ವಹಣೆಯನ್ನು ಸರಳೀಕರಿಸುತ್ತದೆ.
6.ಇನ್ನು ಟ್ಯಾಂಕರ್ ಗೆ ಅತ್ಯಾಧುನಿಕ ಗನ್ ಗಳನ್ನು ಅಳವಡಿಸಲಾಗಿದ್ದು, ಏಕಕಾಲಕ್ಕೆ 500 ಸುತ್ತು ಗುಂಡು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics