ನವದೆಹಲಿ: ಮಹತ್ವಾಕಾಂಕ್ಷೆಯ ಭಾರತ್ ಮಾಲಾ ಸೇರಿದಂತೆ 7 ಲಕ್ಷ ಕೋಟಿ ಮೌಲ್ಯದ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರತ್ ಮಾಲಾ ಯೋಜನೆಯ ಮೊದಲ ಹಂತದಲ್ಲಿ 20,000 ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪಿಟಿಐ ಗೆ ತಿಳಿಸಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಭಾರತ್ ಮಾಲಾ ಯೋಜನೆಯೂ ಸೇರಿದಂತೆ 80 ಸಾವಿರ ಕಿ.ಮೀ ಹೆದ್ದಾರಿಗಳ ಅಭಿವೃದ್ಧಿಗಾಗಿ 7 ಲಕ್ಷ ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳಿಗೆ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಭಾರತ್ ಮಾಲಾ ಸರ್ಕಾರದ ಒಂದು ಮೆಗಾ ಯೋಜನೆ ಆಗಿದ್ದು 50,000 ಕಿ.ಮೀ. ಅಭಿವೃದ್ಧಿಯನ್ನು ಕಂಡ ಎನ್ ಎಚ್ ಡಿಪಿ ಯೋಜನೆಯ ನಂತರ ಎರಡನೆಯ ಅತಿದೊಡ್ಡ ಹೆದ್ದಾರಿ ಯೋಜನೆಯಾಗಿದೆ. ಬಾರತ್ ಮಾಲಾ ಯೋಜನೆಯು ಗಡಿ ಮತ್ತು ಇತರ ಪ್ರದೇಶಗಳ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಇಂದು ಸಂಪುಟ ಅನುಮೋದಿಸಿರುವ ಯೋಜನೆಗಳಲ್ಲಿ ಆರ್ಥಿಕ ಕಾರಿಡಾರ್ ಅಭಿವೃದ್ಧಿ ಯೋಜನೆಗಳೂ ಸೇರಿವೆ. 21,000 ಕಿಲೋ ಮೀಟರ್‌ನ ಆರ್ಥಿಕ ಕಾರಿಡಾರ್‌ಗಳ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ಈ ಹಿಂದೆಯೇ ನಿರ್ಧಾರ ತೆಗೆದುಕೊಂಡಿತ್ತು. ಈ ಯೋಜನೆಯಡಿಯಲ್ಲಿ ಬೆಂಗಳೂರು–ಮಂಗಳೂರು, ಮುಂಬೈ–ಕೊಚ್ಚಿ–ಕನ್ಯಾಕುಮಾರಿ, ಹೈದರಾಬಾದ್–ಪಣಜಿ ಮತ್ತು ಸಾಂಬ್ಲಾಪುರ–ರಾಂಚಿ ಆರ್ಥಿಕ ಕಾರಿಡಾರ್‌ಗಳು ಸೇರಿವೆ ಎಂಡು ಅಧಿಕಾರಿಗಳು ಹೇಳಿದ್ದಾರೆ.