ಚೆನ್ನೈ; ವಿವಾದಿತ ಮೆರ್ಸಲ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ತಮಿಳು ನಟ ಹಾಗೂ ಚಲನಚಿತ್ರ ನಿರ್ಮಾಪಕರ ಸಮಿತಿಯ ಅಧ್ಯಕ್ಷ ವಿಶಾಲ್ ಅವರ ವಿಶಾಲ್ ಫಿಲಂ ಫ್ಯಾಕ್ಟರಿ ಸಂಸ್ಥೆಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ವಿಶಾಲ್ ಫಿಲಂ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಕುರಿತ ಪರಿಶೀಲನೆಗಾಗಿ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದಾಖಲೆಗಳು ದೊರಕಿಲ್ಲ. ಆದರೆ, ಈ ಬಗ್ಗೆ ಐಟಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಕಂಪನಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಶಾಲ್ ಅವರು, ಟಿಡಿಎಸ್ ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ಆಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಂದು ನನ್ನ ಸಿಬ್ಬಂದಿಗಳು ಹೇಳಿದ್ದಾರೆ. ಕಾಲಕಾಲಕ್ಕೆ ನಾನು ಎಲ್ಲಾ ರೀತಿಯ ತೆರಿಗೆಯನ್ನು ಕಟ್ಟುತ್ತಿದ್ದೇನೆ. ನನಗೆ ಯಾವುದೇ ರೀತಿಯ ಭಯವಿಲ್ಲ. ಕಚೇರಿಗೆ ಐಟಿ ಆಧಿಕಾರಿಗಳು ಭೇಟಿ ನೀಡಿರುವ ಸಂದರ್ಭದಲ್ಲಿ ನಾನು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೆ ಎಂದು ಹೇಳಿದ್ದಾರೆ.
ವಿಶಾಲ್ ಕಚೇರಿ ಮೇಲೆ ದಾಳಿ ನಡೆಸಿರುವ ವರದಿಗಳನ್ನು ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ದಳದ ಜಂಟಿ ನಿರ್ದೇಶಕ ಪಿವಿಕೆ. ರಾಜಶೇಖರ್ ಅವರು ತಿರಸ್ಕರಿಸಿದ್ದಾರೆ.