ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ: ಉರಿ ಮೇಲೆ ನಡೆದ ದಾಳಿಯಂತಹ ಭಯೋತ್ಪಾದಕ ದಾಳಿ ಮುಂದಿನ ದಿನಗಳಲ್ಲಿ ನಡೆಯುವ ಸಾಧ್ಯತೆಯಿದ್ದು ದೇಶದ ಒಳನಾಡು ಭಾಗಗಳಲ್ಲಿ ಪ್ರಮುಖ ಸ್ಥಳಗಳ ಭದ್ರತೆಯನ್ನು ಹೆಚ್ಚಿಸಬೇಕೆಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಒಳನಾಡು ಭಾಗಗಳಲ್ಲಿ ಪ್ರಮುಖ ನಿರ್ಮಾಣಗಳ ಭದ್ರತೆ ಆತಂಕಕಾರಿ ವಿಷಯವಾಗಿದೆ. ಉರಿಯಂತಹ ದಾಳಿಗಳು ಮುಂದಿನ ದಿನಗಳಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಬಿಪಿನ್ ರಾವತ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ಉಲ್ಲೇಖಿಸಿದೆ.
ಭಾರತೀಯ ಸೇನಾ ಪಡೆಯ ತ್ವರಿತ ಉನ್ನತೀಕರಣದ ಅಗತ್ಯವಿದೆ ಎಂದು ಒತ್ತಿ ಹೇಳಿದ ಸೇನಾ ಮುಖ್ಯಸ್ಥ ರಾವತ್, ಎದುರಾಳಿಗಳ ಚಲನವಲನಗಳನ್ನು ಪತ್ತೆಹಚ್ಚಲು ಗಡಿಗಳಲ್ಲಿ ಉನ್ನತ ಮಟ್ಟದ ಕಣ್ಗಾವಲು ಮತ್ತು ವಿಚಕ್ಷಣೆಗಾಗಿ ಅವರು ಕರೆ ನೀಡಿದ್ದಾರೆ.
ಇಂದಿನ ಸಂದರ್ಭದಲ್ಲಿ ಪಶ್ಚಿಮ ಮತ್ತು ಉತ್ತರ ಗಡಿಯಲ್ಲಿ ವಿರೋಧಿಗಳ ಮೇಲೆ ಕಣ್ಗಾವಲಿರಿಸಲು ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ದಳವನ್ನು ನಿಯೋಜಿಸಬೇಕೆಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಗಡಿಭಾಗಗಳಲ್ಲಿ ಮತ್ತು ಒಳನಾಡಿನಲ್ಲಿ ಉಗ್ರರ ಮೇಲೆ ಕಣ್ಗಾವಲು ಇರಿಸಲು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಕೂಡ ನಾವು ನೋಡುತ್ತಿದ್ದೇವೆ ಎಂದು ಹೇಳಿರುವ ರಾವತ್ ಹೇಳಿದ್ದಾರೆ.
ಬಿಪಿನ್ ರಾವತ್ ಕೆಲ ದಿನಗಳ ಹಿಂದೆ ಅಗತ್ಯಬಿದ್ದರೆ ಸೇನೆ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲು ಸಿದ್ಧವಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics