ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಿಸ್ ಜೋಡಿ
ನವದೆಹಲಿ: ಆಗ್ರಾದಲ್ಲಿ ಸ್ವಿಡ್ಜರ್'ಲ್ಯಾಂಡ್ ದಂಪತಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕೂಡಲೇ ವರದಿ ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಗುರುವಾರ ಸೂಚನೆ ನೀಡಿದ್ದಾರೆ.
ಸ್ವಿಡ್ಜರ್'ಲ್ಯಾಂಡ್ ದಂಪತಿಗಳು ಕಳೆದ ಭಾನುವಾಗ ಆಗ್ರಾದ ಫತೇಪುರ್ ಸಿಕ್ರಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಕಿಡಿಗೇಡಿಗಳು ದಂಪತಿ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ಸೆಲ್ಫೀ ತೆಗೆದುಕೊಳ್ಳುತ್ತಿದ್ದ ದಂಪತಿಗಳನ್ನು ತಡೆದು ಥಳಿಸಿದ್ದಾರೆ.
ಹಲ್ಲೆಗೊಳಗಾದ ದಂಪತಿಗಳನ್ನು ಕ್ವೆಂಟಿನ್ ಜೆರೆಮಿ ಕ್ಲೆರ್ಕ್ ಮತ್ತು ಮೇರಿ ಡ್ರೋಕ್ಸ್ ಎಂದು ಗುರ್ತಿಸಲಾಗಿದ್ದು, ಸೆ.30 ರಂದು ದಂಪತಿಗಳು ಭಾರತಕ್ಕೆ ಬಂದಿದ್ದಾರೆ. ಶನಿವಾರ ಆಗ್ರಾಗೆ ಬಂದಿದ್ದು, ರೈಲ್ವೇ ನಿಲ್ದಾಣದಲ್ಲಿ ಓಡಾಡುತ್ತಿದ್ದ ವೇಳೆ ಕಿಡಿಗೇಡಿಗಳು ದಂಪತಿಗಳ ಹಿಂದೆ ಹೋಗಿ ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆಂದು ತಿಳಿದುಬಂದಿದೆ.
ಗುಂಪಿನಲ್ಲಿ 4 ಯುವಕರಿದ್ದು, ದುಷ್ಕರ್ಮಿಗಳು ಕ್ವೆಂಟಿನ್ ಜೆರೆಮಿ ಕ್ಲೆರ್ಕ್ ತಲೆಗೆ ಹೊಡೆದಿದ್ದಾರೆ, ಬಳಿಕ ಮೇರಿ ಡ್ರೋಕ್ಸ್ ಮೇಲೆ ದಾಳಿ ಮಾಡಲು ಮುಂದಾದಾಗ ಮೇರಿ ಡ್ರೋಕ್ಸ್ ಕೂಗಾಟ ಕೇಳಿ ಸ್ಥಳೀಯರು ನೆರವಿಗೆ ಬಂದಿದ್ದಾರೆ. ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಸ್ವಿಸ್ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಸ್ವಿಡ್ಜರ್ ಲ್ಯಾಂಡ್ ದಂಪತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ವರದಿ ಸಲ್ಲಿಸವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೆ, ಗಾಯಾಳು ದಂಪತಿಗಳು ದಾಖಲಾಗಿರುವ ಆಸ್ಪತ್ರೆಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವಿಚಾರಿಸಲಿದ್ದಾರೆಂದು ತಿಳಿಸಿದ್ದಾರೆ.