ನವದೆಹಲಿ: ಭಾರತ ಪ್ರವಾಸಕ್ಕೆ ಬಂದಿದ್ದ ಸ್ವಿಡ್ಜರ್'ಲ್ಯಾಂಡ್ ದಂಪತಿ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಉತ್ತರಪ್ರದೇಶದ ಆಗ್ರಾದಲ್ಲಿ ಸ್ವಿಸ್ ದಂಪತಿಗಳ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದರು. ಘಟನೆಯನ್ನು ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸಿತ್ತು.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶದ ಗೃಹ ಇಲಾಖೆ ಕಾರ್ಯದರ್ಶಿ ಭಗವಾನ್ ಸ್ವರೂಪ್ ಅವರು, ಸ್ವಿಸ್ ದಂಪತಿಗಳ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಐವರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ಮೇರಿ ಡ್ರೋಜ್ ಅವರ ಕೈ ಮೂಳೆ ಮುರಿದಿದ್ದು, ಚಿಕಿತ್ಸೆ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕ್ವೆಂಟಿನ್ ಜೆರೆಮಿ ಕ್ಲೆರ್ಕ್'ನನ್ನು ಐಸಿಯುವಿನಿಂದ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ. ಕಿವಿಯಲ್ಲಿ ಕೆಲ ಸಮಸ್ಯೆಯಿರುವುದು ಬಿಟ್ಟರೆ, ಇನ್ನಾವುದೇ ಸಮಸ್ಯೆಗಳಿಲ್ಲ ಎಂದು ದೆಹಲಿಯ ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.