ನವದೆಹಲಿ: ಬ್ಲೂ ವೇಲ್ ಚಾಲೆಂಜ್ ಗೇಮ್ ಒಂದು ರಾಷ್ಟ್ರೀಯ ಸಮಸ್ಯೆ. ಇದರ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಪ್ರಸಾರ ವಾಹಿನಿಯ ದೂರದರ್ಶನ ಮತ್ತು ಖಾಸಗಿ ಚಾನಲ್ ಗಳು ಬ್ಲೂ ವೇಲ್ ಚಾಲೆಂಜ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ತಮ್ಮ ಪ್ರೈಮ್ ಟೈಮ್ ಗಳಲ್ಲಿ ಪ್ರಸಾರ ಮಾದಬೇಕು. ಆ ಮೂಲಕ ಆಟದಿಂದೊದಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲರಾದ ಎನ್ ಎಸ್ ಪೊನ್ನಯ್ಯ ಅವರು ಬ್ಲೂ ವೇಲ್ ಆಟದ ಮೇಲೆ ಸಂಪೂರ್ಣ ನಿಷೇಧವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ನೂರಾರು ಆತ್ಮಹತ್ಯೆಗಳಿಗೆ ಇದು ಕಾರಣ ಎಂದು ದೂರು ಸಲ್ಲಿಸಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಅರ್ಜಿ ವಿಚಾರಣೆ ನಡೆಸಿ ಇದೊಂದು 'ರಾಷ್ಟ್ರೀಯ ಸಮಸ್ಯೆ' ಎಂದು ಹೇಳಿದೆ. ಕೇಂದ್ರ ಸರ್ಕಾರವು ತಾನು ಸಮಸ್ಯೆ ಪರಿಶೀಲನೆಗಾಗಿ ಪರಿಣಿತರ ಸಮಿತಿಯನ್ನು ಸ್ಥಾಪಿಸಿದ್ದು ಮೂರು ವಾರಗಳಲ್ಲಿ ವರದಿಯನ್ನು ತರಿಸಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಸೆಪ್ಟೆಂಬರ್ 15 ರಂದು, ಬ್ಲೂ ವೇಲ್ ಚಾಲೆಂಜ್ ಆಟದ ಮೇಲೆ ಸಂಪೂರ್ಣ ನಿಷೇಧವನ್ನು ಕೋರಿ ಅರ್ಜಿಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿತ್ತು.
ರಷ್ಯಾರಲ್ಲಿ ಪ್ರಾರಂಭವಾದ ಈ ಆಟದ ಸುಳಿಗೆ ಸಿಕ್ಕು ಸುಮಾರು 130 ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.