ಶ್ರೀನಗರ: ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಹಾಗೆಯೇ ಮುಂದುವರೆಯಲು ಬಿಟ್ಟರೆ ಜಮ್ಮು ಮತ್ತು ಕಾಶ್ಮೀರ ಮತ್ತೊಂದು ಸಿರಿಯಾ ಆಗುವ ಅಪಾಯವಿದ್ದು, ಇದನ್ನು ತಪ್ಪಿಸಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಧಾನ ಮಾತುಕತೆಯ ಮಾರ್ಗವನ್ನು ಅನ್ವೇಷಿಸಲು ನೇಮಕಗೊಂಡಿರುವ ನೂತನ ಮದ್ಯವರ್ತಿ ದಿನೇಶ್ವರ್ ಶರ್ಮಾ ಹೇಳಿದ್ದಾರೆ.
ಕೇಂದ್ರ ಸರ್ಕಾರ ವಹಿಸಿರುವ ನೂತನ ಜವಾಬ್ದಾರಿ ಹೊತ್ತ ಬೆನ್ನಲ್ಲೇ ತಮ್ಮ ಕಾರ್ಯಯೋಜನೆ ಕುರಿತು ಮಾತನಾಡಿದ ದಿನೇಶ್ವರ್ ಶರ್ಮಾ ಅವರು, "ಉಗ್ರ ಬೋಧನೆಗಳಿಂದ ದಾರಿ ತಪ್ಪಿರುವ ಕಾಶ್ಮೀರಿ ಯುವಕರನ್ನು ಸರಿದಾರಿಗೆ ತರುವುದೇ ಭಾರತದ ಮುಂದಿರುವ ಬಹಳ ದೊಡ್ಡ ಸವಾಲಾಗಿದೆ. ಅಂತೆಯೇ ಜಮ್ಮು ಮತ್ತು ಕಾಶ್ಮೀರ ರಾಜ್ಯ ಇನ್ನೊಂದು ಸಿರಿಯಾ ಆಗುವುದನ್ನು ತಡೆಯುವುದು ಕೂಡ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಕಾಶ್ಮೀರದ ಜನತೆಯ ಭವಿಷ್ಯದ ಬಗ್ಗೆ ನನಗೆ ನಿಜಕ್ಕೂ ಆತಂಕವಿದೆ. ಯುವಕರನ್ನು ದಾರಿ ತಪ್ಪಿಸುವ ಉಗ್ರ ಬೋಧನೆಗೆ ಇನ್ನಷ್ಟು ಯುವಕರು ಬಲಿಯಾದರೆಂದರೆ ಕಾಶ್ಮೀರವು ಇನ್ನೊಂದು ಯೆಮೆನ್, ಸಿರಿಯಾ ಮತ್ತು ಲಿಬಿಯಾ ಆಗುವುದರಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ನಾವೆಲ್ಲರೂ ಒಟ್ಟುಗ್ಗೂಡಿ ಕಾಶ್ಮೀರಿಗಳ ಈ ಗಂಭೀರ ಸಮಸ್ಯೆಯನ್ನು ಕೊನೆಗಾಣಿಸಲು ಅವಿರತ ಶ್ರಮಿಸಬೇಕಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಅಂತೆಯೇ ತಮ್ಮ ಕಾರ್ಯಯೋಜನೆಯ ಕುರಿತು ಮಾತನಾಡಿದ ದಿನೇಶ್ವರ್ ಶರ್ಮಾ ಅವರು, ಕಾಶ್ಮೀರದಲ್ಲಿ ಹಿಂಸೆಯನ್ನು ಕೊನೆಗಾಣಿಸಲು ರಸ್ತೆ ಬದಿಯ ವ್ಯಾಪರಿಗಳೊಂದಿಗೆ, ಯುವಕರೊಂದಿಗೆ, ಎಲ್ಲ ಸಮುದಾಯದವರೊಂದಿಗೆ ನಾನು ಮಾತನಾಡುಲು ಸಿದ್ಧ. ಪ್ರತಿಯೊಬ್ಬ ಪ್ರಜೆಯೊಂದಿಗೂ ನಾನು ಮಾತನಾಡಲು ಬಯಸುತ್ತೇನೆ. ಆ ಮೂಲಕ ಸಮಸ್ಯೆಗೆ ದಾರಿ ಹುಡುಕುತ್ತೇನೆ. ಅಲ್ಲದೆ ಆಜಾದಿ, ಇಸ್ಲಾಮಿಕ್ ಖಲೀಫಾ ಅಥವಾ ಇಸ್ಲಾಂ ಹೆಸರಿನಲ್ಲಿ ನೀವು ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ ಎಂದು ಕಾಶ್ಮೀರೀ ಯುವಕರಿಗೆ ಮನವರಿಕೆ ಮಾಡಲು ನಾನು ಪ್ರಯತ್ನಿಸುತ್ತೇನೆ ಮತ್ತು ಅದು ನನ್ನ ಯೋಜನೆಯ ಮುಖ್ಯ ಭಾಗವಾಗಿರುತ್ತದೆ ಎಂದು ಶರ್ಮಾ ಹೇಳಿದರು.
ಈ ಹಿಂದೆ ಗುಪ್ತಚರ ದಳದ ನಿರ್ದೇಶಕರಾಗಿದ್ದ ದಿನೇಶ್ವರ್ ಶರ್ಮಾ ಅವರನ್ನು ಕೇಂದ್ರ ಸರಕಾರ ಕಳೆದ ಅಕ್ಟೋಬರ್ 23ರಂದು ಜಮ್ಮು ಮತ್ತು ಕಾಶ್ಮೀರ ಸಂವಾದ ಪ್ರಕ್ರಿಯೆಗೆ ಮಧ್ಯವರ್ತಿಯನ್ನಾಗಿ ನೇಮಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics