ನವದೆಹಲಿ: ಹರಿದ್ವಾರದ ಗೈಂಡಿ ಖಟ ಗ್ರಾಮದ 800 ಕ್ಕೂ ಅಧಿಕ ಮಂದಿ ಹುಟ್ಟಿದ್ದು ಒಂದೇ ದಿನ, ಅದು ಜನವರಿ 1. ಆಧಾರ್ ಕಾರ್ಡಿನಲ್ಲಾದ ಎಡವಟ್ಟು ಇದು. ಈ ಗ್ರಾಮದ 800ಕ್ಕೂ ಅಧಿಕ ಮಂದಿಯ ಜನ್ಮ ದಿನಾಂಕ ಆಧಾರ್ ಕಾರ್ಡಿನಲ್ಲಿ ಒಂದೇ ದಿನ ಎಂದು ನಮೂದಾಗಿದೆ.
ಈ ತಪ್ಪಿನ ಬಗ್ಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ವ್ಯಕ್ತಿಯ ಹುಟ್ಟಿದ ದಿನಾಂಕ ಸರಿಯಾಗಿ ಗೊತ್ತಿಲ್ಲದ ಸಂದರ್ಭದಲ್ಲಿ ಮತ್ತು ಜನ್ಮ ದಿನಾಂಕವನ್ನು ದೃಢಪಡಿಸುವ ಸೂಕ್ತ ದಾಖಲೆಗಳಿಲ್ಲದಾಗ ಕಂಪ್ಯೂಟರ್ ನಲ್ಲಿ ಅಪ್ ಲೋಡ್ ಮಾಡುವಾಗ ಈ ತಪ್ಪುಗಳಾಗಿವೆ ಎಂದು ಸಮರ್ಥಿಸಿಕೊಂಡಿದೆ.
ನಮಗೆ ವಿಶಿಷ್ಟ ಗುರುತು ಸಂಖ್ಯೆ ಸರ್ಕಾರ ನೀಡುತ್ತದೆ ಎಂದು ಹೇಳುತ್ತಾರೆ. ಆದರೆ ಇದರಲ್ಲೇನು ವಿಶಿಷ್ಟತೆಯಿದೆ. ನಮ್ಮ ಹುಟ್ಟಿದ ದಿನಾಂಕ ಕೂಡ ಒಂದೇ ಆಗಿದೆ ಎಂದು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡುತ್ತಾರೆ ವಾಸಿರ್ ಆಲಿ ಚೋಪ್ರಾ ಎನ್ನುವ ನಿವಾಸಿ.
ಇದಕ್ಕೆ ಸಂಬಂಧಪಟ್ಟ ಇಲಾಖೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಎಲ್ಲಾ ರೀತಿಯಲ್ಲಿ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಮಾಧ್ಯಮಗಳ ವರದಿಯಿಂದ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹರಿದ್ವಾರದ ಉಪ ವಿಭಾಗ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ಹೇಳಿದ್ದಾರೆ.