ಲಖನೌ: ವೃಂದಾವನ ಮತ್ತು ಬರ್ಸಾನಾವನ್ನು ಪವಿತ್ರ ತೀರ್ಥ ಸ್ಥಳಗಳೆಂದು ಘೋಷಣೆ ಮಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ, ಪವಿತ್ರ ಕ್ಷೇತ್ರಗಳಲ್ಲಿ ಮೊಟ್ಟೆ, ಮಾಂಸ ಹಾಗೂ ಮದ್ಯ ಸೇವನೆಗಳ ಮೇಲೆ ನಿಷೇಧ ಹೇರಿದೆ.
ಮಥುರಾದ ವೃಂದಾವನವು ಶ್ರೀಕೃಷ್ಣನ ಹಿರಿಯ ಸಹೋದರ ಬಲರಾಮನ ಜನ್ಮ ಸ್ಥಳ ಎಂದೇ ಪ್ರಸಿದ್ಧಿ ಪಡೆದಿದೆ. ಬರ್ಸಾ ರಾಧೆಯ ಜನ್ಮಸ್ಥಳವಾಗಿದೆ. ಈ ಎರಡೂ ಸ್ಥಳಗಳಿಗೆ ಲಕ್ಷಗಟ್ಟಲೆ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಭಕ್ತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ವೃಂದಾವನ ಹಾಗೂ ಬರ್ಸಾನವನ್ನು ಪವಿತ್ರ ಸ್ಥಳಗಳೆಂದು ಗುರ್ತಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದೆ.
ನವೆಂಬರ್ 22 ರಿಂದ 3 ಹಂತಗಳಲ್ಲಿ ನಡೆಯಲಿರುವ ಪೌರಾಳಿತ ಸಂಸ್ಥೆಗಳ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಯೋದಿ ಆದಿತ್ಯನಾಥ್ ಅವರು ಈ ರೀತಿಯ ನಿರ್ಧಾರೆ ತೆಗೆದುಕೊಂಡಿರುವುದು ಇದೀಗ ಅಚ್ಚರಿಯನ್ನುಂಟು ಮಾಡಿದೆ.
ವೃಂದಾವನ ಮತ್ತು ಬರ್ಸಾ ಪುಣ್ಯ ಕ್ಷೇತ್ರಗಳಲ್ಲಿ ಒಳ ಚರಂಡಿ ನಿರ್ಮಾಣ ಮತ್ತು ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣಕ್ಕೆಂದು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ರೂ.350 ಕೋಟಿಗಳನ್ನು ಮಂಜೂರು ಮಾಡಿದೆ ಎಂದು ಸಚಿವ ಲಕ್ಷ್ಮಿ ನಾರಾಯಣ ಚೌಧರಿಯವರು ಹೇಳಿದ್ದಾರೆ.
ಉತ್ತರಪ್ರದೇಶ ಪ್ರವಾಸಿಗರ ತಾಣಗಳು ಹಾಗೂ ಧಾರ್ಮಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ವೃಂದಾವನ ಹಾಗೂ ಬರ್ಸಾನದಲ್ಲಿರುವ ಹಳೇ ದೇಗುಲಗಳನ್ನು ನವೀಕರಣಗೊಳಿಸಲು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮಥುರಾದಿಂದ ವೃಂದಾವನ 11 ಕಿ.ಮೀ ದೂರದಲ್ಲಿದ್ದು, 5,000ಕ್ಕೂ ಹೆಚ್ಚು ದೇಗುಲಗಳಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos