ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್
ನವದೆಹಲಿ: ಆಗ್ರಾದಲ್ಲಿ ಸ್ವಿಟ್ಜರ್'ಲ್ಯಾಂಡ್ ದಂಪತಿಗಳ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್ ಅವರು, ಪ್ರವಾಸಿಗರಿಗೆ ಭಾರತ ಸುರಕ್ಷಿತ ತಾಣ ಎಂದು ಶುಕ್ರವಾರ ಹೇಳಿದ್ದಾರೆ.
ಸ್ವಿಸ್ ದಂಪತಿಗಳ ಮೇಲೆ ದಾಳಿ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅಮೆರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಪ್ರತೀ ದಿನ ಗುಂಡಿನ ದಾಳಿ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆ ದೇಶಗಳು ಪ್ರವಾಸಕ್ಕೆ ಸುರಕ್ಷಿತವಲ್ಲದ ದೇಶವೆಂದು ನಾವು ಕರೆಯುತ್ತೇವೆಯೇ ಎಂದು ಪ್ರಶ್ನಿಸಿದ್ದಾರೆ.
ಅ.27ರಂದು ಉತ್ತರಪ್ರದೇಶದ ಆಗ್ರಾದಲ್ಲಿ ಸ್ವಿಸ್ ದಂಪತಿಗಳ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದರು. ಘಟನೆಯನ್ನು ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸಿತ್ತು.
ಸ್ವಿಡ್ಜರ್'ಲ್ಯಾಂಡ್ ದಂಪತಿಗಳು ಕಳೆದ ಭಾನುವಾರ ಆಗ್ರಾದ ಫತೇಪುರ್ ಸಿಕ್ರಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಕಿಡಿಗೇಡಿಗಳು ದಂಪತಿ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ಸೆಲ್ಫೀ ತೆಗೆದುಕೊಳ್ಳುತ್ತಿದ್ದ ದಂಪತಿಗಳನ್ನು ತಡೆದು ಥಳಿಸಿದ್ದರು. ಹಲ್ಲೆಗೊಳಗಾದ ಸ್ವಿಸ್ ದಂಪತಿಗಳು ಆಗ್ರಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.