ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್
ರಾಯ್ಪುರ: ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಜೇಶ್ ಮುನಾತ್ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ತನಿಖೆ ನಡೆಸುವಂತೆ ಸಿಬಿಐ ಅಧಿಕಾರಿಗಳಿಗೆ ಪತ್ರವೊಂದರನ್ನು ಬರೆದಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಪ್ರಕರಣ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಛತ್ತೀಸ್'ಗಢ ಸರ್ಕಾರದ ವರ್ಚಸ್ಸನ್ನು ಹಾಳು ಮಾಡುವ ಸಲುವಾಗಿ ಕಾಂಗ್ರೆಸ್ ಈ ರೀತಿಯ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಈ ರೀತಿಯ ಕೀಳುಮಟ್ಟಕ್ಕೆ ಇಳಿಯುತ್ತದೆ ಎಂದು ನಾವು ಊಹಿಸಿರಲಿಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ನಾನು ತನಿಖೆ ನಡೆಸುವಂತೆ ಸಿಬಿಐಗೆ ಪತ್ರವನ್ನು ಬರೆದಿದ್ದು, ಭವಿಷ್ಯದಲ್ಲಿ ಯಾವುದೇ ಪಕ್ಷಗಳು ಈ ರೀತಿಯ ವಿಚಾರಗಳನ್ನು ಇಟ್ಟುಕೊಂಡು ತಮ್ಮ ರಾಜಕೀಯ ಲಾಭಕ್ಕೆ ಇಂತಹ ಕೀಳುಮಟಕ್ಕೆ ಇಳಿಯಬಾರದು ಎಂದು ತಿಳಿಸಿದ್ದಾರೆ.
ಸುಲಿಗೆ ಹಾಗೂ ಬ್ಲ್ಯಾಕ್ ಮೇಲೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ, ಬಿಬಿಸಿ ಹಿಂದಿ ವಿಭಾಗದ ಮಾಜಿ ವರದಿಗಾರ ಮತ್ತು ಛತ್ತೀಸ್'ಗಢ ಕಾಂಗ್ರೆಸ್'ನ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ವಿನೋದ್ ವರ್ಮಾ ಅವರನ್ನು ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಪಡಿಸಲಾಗಿತ್ತು.
ವಿನೋದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಅವರ ಬಳಿಯಿದ್ದ ಹಲವು ಅಶ್ಲೀಲ ವಿಡಿಯೋಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಛತ್ತೀಸ್ಗಢ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭುಪೇಂದ್ರ ಬಘೇಲ್ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ವಿಚಾರಣೆ ವೇಳೆ ವಿನೋದ್ ವರ್ಮಾ ಅವರು ಛತ್ತೀಸ್ಗಢ ಸಚಿವರು ಭಾಗಿಯಾಗಿರುವ ಸೆಕ್ಸ್ ಸಿಡಿಯೊಂದು ತನ್ನ ಬಳಿಯಿರವುದಾಗಿ ಹೇಳಿಕೊಂಡಿದ್ದರು. ಸಚಿವ ರಾಜೇಶ್ ಮುನ್ನಾತ್ ಅವರ ಸೆಕ್ಸ್ ಸಿಡಿ ನನ್ನ ಬಳಿಯಿದ್ದು, ಹೀಗಾಗಿ ನನ್ನ ವಿರುದ್ದ ಸರ್ಕಾರ ತಿರುಗಿಬಿದ್ದಿದೆ ಎಂದು ಆರೋಪಿಸಿದ್ದರು.