ನವದೆಹಲಿ: ಜೆಟ್ ಏರ್ ವೇಸ್ ವಿಮಾನದ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿ ವಿಮಾನ ತುರ್ತು ಭೂಸ್ಪರ್ಶಕ್ಕೆ ಕಾರಣವಾಗಿದ್ದ ವ್ಯಕ್ತಿಯನ್ನು ಅಹಮದಾಬಾದ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಪ್ರಯಾಣಿಕ ಗುಜರಾತ್ ನ ಅಮ್ರೆಲಿ ಜಿಲ್ಲೆಯ ರಾಜುಲಾ ಪಟ್ಟಣದ ನಿವಾಸಿ ಬಿರ್ಜು ಪ್ರಸಾದ್ ಸಲ್ಲಾ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಮಾನ ಅಹಮದಾಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ಸಲ್ಲಾನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಈ ಹಿಂದೆಯೂ ಇಂತಹ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈಯಿಂದ ದೆಹಲಿಗೆ ಹೊರಟಿದ್ದ ಜೆಟ್ ಏರ್ ವೇಸ್ ವಿಮಾನ 9ಡಬ್ಲ್ಯು33ರಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಹ್ಮದಾಬಾದಿಗೆ ಮಾರ್ಗ ಬದಲಾಯಿಸಿ ತುರ್ತು ಭೂಸ್ಪರ್ಶ ಮಾಡಲಾಯಿತು.
ಜೆಟ್ ಏರ್ ವೇಸ್ 9ಡಬ್ಲ್ಯು ಬಿಒಎಮ್-ಡಿಎಎಲ್ ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರವೊಂದು ಸಿಬ್ಬಂದಿಗೆ ಕಾಣಿಸಿತು. 9 ಡಬ್ಲ್ಯು 330 ವಿಮಾನವನ್ನು ಹೈಜಾಕ್ ಮಾಡಿ ನೇರವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ಯಲಾಗುತ್ತದೆ. ವಿಮಾನವನ್ನು ನಿಗದಿತ ಸ್ಥಳದಲ್ಲಿ ಇಳಿಸಲು ಬಿಡುವುದಿಲ್ಲ. ಒಂದು ವೇಳೆ ಬಿಟ್ಟರೆ ಪ್ರಯಾಣಿಕರು ಸಾಯುತ್ತಾರೆ, ಈ ಪತ್ರವನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು.
ವಿಮಾನದ ಕಾರ್ಗೊ ಪ್ರದೇಶ ಸ್ಫೋಟಕ ಬಾಂಬ್ ಗಳನ್ನು ಹೊಂದಿದ್ದು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಿದರೆ ಸ್ಫೋಟಗೊಳ್ಳುತ್ತದೆ ಎಂದು ಕೂಡ ಬರೆಯಲಾಗಿತ್ತು. ಸಂದೇಶ ಸಿಕ್ಕಿದ ತಕ್ಷಣ ಬಾಂಬ್ ಬೆದರಿಕೆ ಕಾರ್ಯ ಸಮಿತಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸೇರಿ ತನಿಖಾ ಪ್ರಕ್ರಿಯೆಯನ್ನು ಆರಂಭಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics