ಚೆನ್ನೈ: ಚೆನ್ನೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಭಾಗಶಃ ಅಸ್ತವ್ಯಸ್ತಗೊಂಡಿದ್ದು. ಮಳೆಯಲ್ಲಿ ಸಿಲುಕಿಗೊಂಡ ಜನತೆ ಸಕಾಲಕ್ಕೆ ಮನೆ, ಕಚೇರಿ ತಲುಪದೇ ಪರದಾಡಿದ್ದಾರೆ.
ಈಶಾನ್ಯ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಮಳೆ ಸಂಬಂಧಿತ ಅನಾಹುತದಲ್ಲಿ ಒಬ್ಬರು ಬಲಿಯಾಗಿದ್ದಾರೆ.
ಚೆನ್ನೈ, ನಾಗಪಟ್ಟಣಂ, ರಾಮನಾಥಪುರಂ, ಕಾಂಚಿಪುರಂ, ತಿರುವಳ್ಳುವರ್, ಕಡಲೂರು ಸೇರಿದಂತೆ ಹಲವು ಕಡೆ ವರುಣನ ಆರ್ಭಟವಿತ್ತು. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರಿ ಮಳೆ ಹಾಗೂ ಒಳನಾಡಿನಲ್ಲಿ ಸಾಧಾರಣದಿಂದ ಕೂಡಿದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಂಜಾವೂರು ಜಿಲ್ಲೆಯ ತಿನ್ನೈಯೂರುವಿನಲ್ಲಿ ಗೋಡೆ ಕುಸಿದು 38 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತದ ಪ್ರಭಾವದಿಂದಾಗಿ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.