ಬಿಹಾರದಲ್ಲಿ ಕಾಂಗ್ರೆಸ್ ಛಿದ್ರ? 27 ಶಾಸಕರ ಪೈಕಿ 14 ಶಾಸಕರು ಜೆಡಿಯುನತ್ತ ಮುಖ: ವರದಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಘಟಬಂಧನ ತೊರೆದು ಎನ್ಡಿಎ ಪಾಳೆಯಕ್ಕೆ ಮರಳಿದ್ದರಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ಸಿಗೆ ಇದೀಗ ಮತ್ತೊಂದು...
ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಘಟಬಂಧನ ತೊರೆದು ಎನ್ಡಿಎ ಪಾಳೆಯಕ್ಕೆ ಮರಳಿದ್ದರಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ಸಿಗೆ ಇದೀಗ ಮತ್ತೊಂದು ದೊಡ್ಡ ಹೊಡೆತ ಬೀಳುವಂತಿದೆ.
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ 27 ಶಾಸಕರ ಪೈಕಿ 14 ಶಾಸಕರು ಪಕ್ಷ ತೊರೆದು ಜೆಡಿಯು ಸೇರುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇದರಿಂದ ಬಿಹಾರದಲ್ಲಿ ಕಾಂಗ್ರೆಸ್ ಹೋಳಾಗುವ ಅಪಾಯಕ್ಕೆ ಸಿಲುಕಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಹಾರಕ್ಕೆ ರವಾನಿಸಿದ್ದಾರೆ.
ಇದೇ ವೇಳೆ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸದಾನಂದ ಸಿಂಗ್ ಅವರನ್ನು ದೆಹಲಿಗೆ ಕರೆಸಿಕೊಂಡು ಪಕ್ಷ ಹೋಳಾಗುವುದನ್ನು ತಪ್ಪಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಜೆಡಿಯು ನಾಯಕರ ಜತೆ ಕಾಂಗ್ರೆಸ್ ನ 14 ಶಾಸಕರು ಸಮಾಲೋಚನೆ ನಡೆಸಿ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.