ಚೆನ್ನೈ: ಬ್ಲೂ ವೇಲ್ ಆನ್ ಲೈನ್ ಚಾಲೆಂಜ್ ಭೂತಕ್ಕೆ ಅಂಟಿಕೊಂಡಿದ್ದ ತಮಿಳುನಾಡು ಮೂಲದ ಬಾಲಕನೋರ್ವ ತನ್ನನ್ನು ರಕ್ಷಿಸುವಂತೆ ದೂರವಾಣಿ ಕರೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಪಾಯಕಾರಿ ಆನ್‌ಲೈನ್ ಆಟ ಬ್ಲೂವೇಲ್ ಚಾಲೆಂಜ್ ಗೀಳು ಅಂಟಿಸಿಕೊಂಡು ದೇಶಾದಾದ್ಯಂತ ಹಲವರು ಆತ್ಮಹತ್ಯೆಗೆ ಶರಣಾದ ಕುರಿತು ವ್ಯಾಪಕ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಬ್ಲೂವೇಲ್ ಚಾಲೆಂಜ್‌ನೊಳಗೆ ಪ್ರವೇಶಿಸಿದ ಹಲವು ಮಕ್ಕಳ ಈ ಡೆಡ್ಲಿಗೇಮ್ ನಿಂದ ಹೊರಬರಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ತಮಿಳುನಾಡಿನ ತಿರುಪುರ ಮೂಲದ ಬಾಲಕನೋರ್ವ ತಮಿಳುನಾಡು ಸರ್ಕಾರ ರಚನೆ ಮಾಡಿರುವ ಸಹಾಯವಾಣಿ 104ಕ್ಕೆ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಮೊರೆ ಇಟ್ಟಿದ್ದಾನೆ.
"ಅವರು ನನ್ನನ್ನು ಹಾಗೂ ನನ್ನ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುತ್ತಾರೆ. ದಯವಿಟ್ಟು ನಮ್ಮನ್ನು ರಕ್ಷಿಸಿ” ಎಂದು ಬಾಲಕ ದೂರವಾಣಿ ಮೂಲಕ ಮನವಿ ಮಾಡಿದ್ದಾನೆ. ಬಾಲಕನ ಮೊರೆ ಕೇಳುತ್ತಿದ್ದಂತೆಯೇ ಅಲರ್ಟ್ ಆದ ತಮಿಳುನಾಡು ಪೊಲೀಸರು ಬಾಲಕನನ್ನು ಯಾರು ಕೊಲ್ಲುತ್ತಾರೆ ಎಂದು ಕೇಳಿದ್ದಾರೆ. ಈ ವೇಳೆ ಬಾಲಕ ಮೌನಕ್ಕೆ ಶರಣಾಗಿ ನಂತರ ತಾನು ಬ್ಲೂ ವೇಲ್ ಚಾಲೆಂಜ್ ಆಟದೊಳಗೆ ಪ್ರವೇಶಿಸಿರುವ ಕುರಿತು ಮಾಹಿತಿ ನೀಡಿದ್ದಾನೆ. ಅಲ್ಲದೆ ತನ್ನನ್ನು ಅದರಿಂದ ಹೊರಗೆ ತರುವಂತೆ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪ್ರಸ್ತುತ ಬಾಲಕನನ್ನು ಪೋಷಕರ ಮೇಲ್ವಿಚಾರಣೆಗೆ ನೀಡಲಾಗಿದ್ದು, ಪೊಲೀಸರು ಬಾಲಕನ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಆತ್ಮಹತ್ಯೆ ತಡೆ ಕೇಂದ್ರ ಸಂಸ್ಥೆಯ ಸ್ಥಾಪಕಿ ಹಾಗೂ ವೈದ್ಯೆ ಲಕ್ಷ್ಮೀ ವಿಜಯ ಕುಮಾರ್ ಅವರು, ದೇಶಾದ್ಯಂತ ಬ್ಲೂ ವೇಲ್ ಗೇಮ್ ನೊಳಗೆ ಪ್ರವೇಶ ಮಾಡಿರುವ ಮಕ್ಕಳು ಇದೀಗ ಆ ಗೇಮ್ ನಿಂದ ಹೊರಗೆ ಬರುವ ದಾರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹೆಚ್ಚಿನವರು ಬ್ಲೂವೇಲ್ ಚಾಲೆಂಜ್‌ನಿಂದ ಹೊರಬರಲು ಹೆದರುತ್ತಿದ್ದಾರೆ. ಯಾಕೆಂದರೆ ಆಟಗಾರರು ಹಾಗೂ ಅವರ ಕುಟುಂಬವನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ. ಬ್ಲೂವೇಲ್ ಚಾಲೆಂಜ್‌ನ ಗೀಳು ಅಂಟಿಸಿಕೊಂಡ ಮಕ್ಕಳಲ್ಲಿ ಮೂರು ದಿನಗಳಲ್ಲಿ ಕನಿಷ್ಠ ಒಂದು ಮಗು ತಪ್ಪೊಪ್ಪಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಆನ್ ಲೈನ್ ಆಡಳಿತಗಾರರು ನೀಡುವ 50 ಟಾಸ್ಕ್‌ಗಳನ್ನು ಪೂರ್ಣಗೊಳಿಸುತ್ತಾ ಹೋಗುವಾಗ ಆರಂಭದಲ್ಲಿ ಕುತೂಹಲ ಉಂಟಾಗುತ್ತದೆ. ಈ 50 ಟಾಸ್ಕ್‌ಗಳಲ್ಲಿ ಹೆಚ್ಚಿನವು ತಮಗೆ ತಾವೇ ಹಾನಿ ಮಾಡಿಕೊಳ್ಳುವಂತಹವಾಗಿವೆ. ಕೊನೆಯ ಟಾಸ್ಕ್ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos