ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಕಾರ್ಯಕ್ರಮದಲ್ಲಿ ಸಿಎಂ ಚೌಹ್ವಾಣ್
ಭೋಪಾಲ್: ವಯಸ್ಸಾದ ಪೋಷಕರನ್ನು ನೋಡಿಕೊಳ್ಳದೇ ಬೀದಿಗೆ ತಳ್ಳಿದರೆ ಅಂತಹ ಮಕ್ಕಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜುರುಗಿಸುತ್ತದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಹೇಳಿದ್ದಾರೆ.
ಭಾನುವಾರ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ-2017ರ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ವಾಣ್ ಅವರು, ಪೋಷಕರನ್ನು ಬೀದಿಗೆ ಬಿಡುವ ಅಥವಾ ವೃದ್ಧಾಶ್ರಮಕ್ಕೆ ಬಿಡುವ ಅಮಾನವೀಯ ಸಂಸ್ಕೃತಿ ನಮ್ಮದಲ್ಲ. ಬದಲಿಗೆ ನಮ್ಮನ್ನು ಸಾಕಿ ಸಲಹಿದ ಪೋಷಕರಿಗೆ ಅವರ ಸಂಧ್ಯಾಕಾಲದಲ್ಲಿ ಸೇವೆ ಮಾಡುವುದು ನಮ್ಮ ಸಂಸ್ಕೃತಿ ಎಂದು ಹೇಳಿದರು. ಅಂತೆಯೇ ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಕ್ಕಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ತಮ್ಮ ಸರ್ಕಾರ ಕಾನೂನು ಜಾರಿಗೆ ಮುಂದಾಗಿದೆ ಎಂದು ಅವರು ತಿಳಿಸಿದರು.
ಅಂತೆಯೇ ಐದು ವರ್ಷಗಳ ಹಿಂದೆ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಆರಂಭಸಿದ್ದಾಗ ಹಲವರು ಸರ್ಕಾರದ ಕ್ರಮವನ್ನು ಟೀಕಿಸಿದ್ದರು. ಯಾತ್ರಾ ಯೋಜನೆ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ ಎಂದು ಟೀಕಿಸಿದ್ದರು. ಆದರೆ ನಾನು ಹಿರಿಯರಿಗೆ ಸೇವೆ ಸಲ್ಲಿಸುವುದು ಸರ್ಕಾರದ ಕರ್ತವ್ಯ ಎಂದು ವಿರೋಧದ ನಡುವೆಯೂ ಯೋಜನೆ ಮುಂದುವರೆಸಿದೆ. ಇದೀಗ ಈ ಯೋಜನೆ ನಮ್ಮ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಹಲವು ರಾಜ್ಯಗಳು ಇಂತಹುದೇ ತೀರ್ಥಕ್ಷೇತ್ರ ಯೋಜನೆಗಳನ್ನು ರೂಪಿಸುತ್ತಿವೆ.
ಅಂತೆಯೇ ತಮ್ಮ ಸರ್ಕಾರ ಹಿರಿಯರ ತೀರ್ಥಕ್ಷೇತ್ರ ಯೋಜನೆಯನ್ನು ಮತ್ತಷ್ಟು ಸರಳೀಕರಿಸುವ ಕುರಿತು ಯೋಜನೆ ರೂಪಿಸಿದ್ದು, ಕಿರಿಯರನ್ನೂ ಕೂಡ ತೀರ್ಥ ಕ್ಷೇತ್ರ ಯೋಜನೆಯಲ್ಲಿ ಅಳವಡಿಸಲು ಚಿಂತನೆಯಲ್ಲಿ ತೊಡಗಿದ್ದೇವೆ ಎಂದು ಅವರು ಹೇಳಿದರು.