ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಮುಂದುವರೆಸಿರುವ ಡೆಡ್ಲಿ ಗೇಮ್ ಬ್ಲೂ ವೇಲ್ ಭೂತಕ್ಕೆ ಅತೀ ಹೆಚ್ಚು ಶೋಧ ನಡೆಸಿದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನ ಪಡೆದಿದೆ.
2013ರಲ್ಲಿ ರಷ್ಯಾ ಮೂಲದ ತಂತ್ರಜ್ಞರಿಂದ ನಿರ್ಮಾಣವಾದ ಈ ಡೆಡ್ಲಿ ಗೇಮ್ ನಿಂದಾಗಿ ಈ ವರೆಗೂ ವಿಶ್ವಾದ್ಯಂತ ಸುಮಾರು 130 ಮಂದಿ ಮಕ್ಕಳ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಭಾರತದಲ್ಲೇ ಸಮಾರು 6ಕ್ಕೂ ಹೆಚ್ಚು ಸಾವು ದಾಖಲಾಗಿದ್ದು, ದಿನಗಳೆದಂತೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಪ್ರತಿನಿತ್ಯ ಬ್ಲೂವೇಲ್ ಚಾಲೆಂಜ್ ಕುರಿತಂತೆ ಭಾರತದಲ್ಲಿ ಒಂದಿಲ್ಲೊಂದು ಸುದ್ದಿ ಪ್ರಸಾರವಾಗುತ್ತಿದ್ದು, ಭಾರತದಲ್ಲಿ ಬ್ಲೂ ವೇಲ್ ಚಾಲೆಂಜ್ ಪ್ರತಿನಿತ್ಯ ಟ್ರೆಂಡಿಂಗ್ ಪದವಾಗಿ ಹೋಗಿದೆ.
2013ರಲ್ಲೇ ರಷ್ಯಾದಲ್ಲಿ ಈ ಗೇಮ್ ನಿರ್ಮಾಣವಾಗಿತ್ತಾದರೂ, ಕಳೆದ 12 ತಿಂಗಳಿಂದೀಚೆಗೆ ಭಾರತದಲ್ಲಿ ಈ ಡೆಡ್ಲಿ ಗೇಮ್ ವೈರಲ್ ಆಗಿದೆ. ಖ್ಯಾತ ಸರ್ಚ್ ಎಂಜಿನ್ ಗೂಗಲ್ ಟ್ರೆಂಡಿಂಗ್ ದತ್ತಾಂಶ ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬ್ಲೂವೇಲ್ ಗೇಮ್ ಗಾಗಿ ಶೋಧ ನಡೆಸಿದ್ದಾರೆ. ಈ ಪೈಕಿ ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು ಬಾರಿ ಬ್ಲೂವೇಲ್ ಚಾಲೆಂಜ್ ಗೇಮ್ ಗಾಗಿ ಶೋಧ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಉಳಿದಂತೆ ಮಣಿಪುರ, ನಾಗಾಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅತೀ ಹೆಚ್ಚು ಬಾರಿ ಬ್ಲೂ ವೇಲ್ ಗಾಗಿ ಶೋಧ ನಡೆಸಲಾಗಿದೆ.
ಇನ್ನು ಬ್ಲೂ ವೇಲ್ ಚಾಲೆಂಜ್ ಡೌನ್ಲೋಡ್ ಕೀವರ್ಡ್ ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಶೋಧಕ್ಕೆ ಒಳಪಟ್ಟಿದ್ದು, ಕೇವಲ ಬ್ಲೂ ವೇಲ್ ಚಾಲೆಂಜ್ ಎಂಬ ಕೀವರ್ಡ್ ಕೋಲ್ಕತಾದಲ್ಲಿ ಹೆಚ್ಚಾಗೆ ಶೋಧಕ್ಕೆ ಒಳಗಾಗಿದೆ. ಕಳೆದ 12 ತಿಂಗಳುಗಳ ಪೈಕಿ ಜೂನ್ ತಿಂಗಳಿಂದೀಚೆಗೆ ಅಂದರೆ ಬ್ಲೂ ವೇಲ್ ಚಾಲೆಂಜ್ ಗೆ ಭಾರತದಲ್ಲಿ ಮೊದಲ ಬಲಿ ಸುದ್ದಿ ಹೊರ ಬಿದ್ದ ಬಳಿಕ ಈ ಡೆಡ್ಲಿ ಗೇಮ್ ಕುರಿತ ಶೋಧ ಪ್ರಕ್ರಿಯೆ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಗೂಗಲ್ ತಜ್ಞರು ಅಭಿಪ್ರಾಯಪಟ್ಟಿರುವಂತೆ ಬ್ಲೂ ವೇಲ್ ಗೇಮ್ ಗಾಗಿ ಆನ್ ಲೈನ್ ನಲ್ಲಿ ಶೋಧ ನಡೆಸಿದವರೆಲ್ಲರೂ ಗೇಮ್ ಗಾಗಿ ಶೋಧ ನಡೆಸಿದ್ದಾರೆ ಎಂದು ಹೇಳಲಾಗುವುದಿಲ್ಲ. ಈ ಡೆಡ್ಲಿ ಗೇಮ್ ಬಗ್ಗೆ ತಿಳಿದುಕೊಳ್ಳಲು ಹಾಗೂ ಈ ಗೇಮ್ ನಿಂದ ಹೊರಬರುವುದು ಹೇಗೆ ಎಂದು ತಿಳಿಯಲು ಕೂಡ ಸಾಕಷ್ಟು ಮಂದಿ ಅಂತರ್ಜಾಲ ಜಾಲಾಡಿದ್ದಾರೆ.