ಮುಂಬೈ: ನಗರ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಮತ್ತು ಮನೆಗಳಲ್ಲಿ ಗಣೇಶ ಮೂರ್ತಿಯನ್ನು ಸ್ಪಾಪಿಸಿ 11 ದಿನಗಳ ಕಾಲ ವಿಘ್ನವಿನಾಶಕ ವಿನಾಯಕನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ಮುಂಬೈ ನಗರ ಜನತೆ, ಇಂದು ಗಣೇಶನ ವಿಗ್ರಹಗಳ ಅಂತಿನ ದಿನ ವಿಸರ್ಜನೆಯನ್ನು ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಬೈನಲ್ಲಿ ಭಾರೀ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆ ಹಿನ್ನಲೆಯಲ್ಲಿ ನಗರದ ವಿವಿಧೆಡೆ ಭಾರೀ ಸಿದ್ಥತೆಗಳನ್ನು ನಡೆಸಲಾಗಿದ್ದು, ಇದಕ್ಕಾಗಿ ಈಗಾಗಲೇ ಮುಂಬೈ ನಗರದೆಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭದ್ರತೆಗೆ ಯಾವುದೇ ರೀತಿಯ ಧಕ್ಕೆಯುಂಟಾಗದಂತೆ 40 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, 5,000 ಸಿಸಿವಿಟಿ ಹಾಗೂ ಡ್ರೋನ್ ಗಳನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವ ಸಲುವಾದಿ 3,600 ಪೊಲೀಸರು ವಿಶೇಷವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಗಣಪತಿ ವಿಸರ್ಜನೆ ವೇಳೆ ಜನಸಂದಣಿಯಿಂದ ವಾಹನ ಸಂಚಾರಕ್ಕೆ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು 500 ಟ್ರಾಫಿಕ್ ವಾರ್ಡನ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣಪತಿ ವಿಸರ್ಜನಾ ಸ್ಥಳಗಳಲ್ಲಿ ಬಾರೀ ಜನಸಾಗರ ಸೇರಲಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕ ಜನದಟ್ಟಣೆಯ ಮೇಲೆ ಕಣ್ಗಾವಲಿರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಗಣಪತಿ ವಿಗ್ರಹಗಳ ಸ್ವಾಗತಕ್ಕಾಗಿ ನಗರದ ಅಲ್ಲಲ್ಲಿ ಸ್ವಾಗತ ಕೇಂದ್ರಗಳನ್ನು ತೆರೆಯಲಾಗಿದೆ. ಭಕ್ರರಿಗಾಗಿ ಬಿಎಂಸಿ 74 ಪ್ರಥಮ ಆರೋಗ್ಯ ಚಿಕಿತ್ಸಾ ಕೇಂದ್ರ ಮತ್ತು 60ಕ್ಕೂ ಹೆಚ್ಚು ಆ್ಯಂಬುಲೆನ್ಸ್'ಗಳ ವ್ಯವಸ್ಥೆಯನ್ನು ಕಲ್ಪಿಸಿದೆ. ಚೌಪಾಟಿಗಳಲ್ಲಿ ಗಣೇಶನ ವಿಸರ್ಜನೆ ವೇಲೆ ದುರ್ಘಟನೆಗಳು ಸಂಭವಿಸಿದರೆ 71 ಮೋಟರ್ ಬೋಟ್ ಗಳನ್ನು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್ ಬಾಗ್ ರಾಜಾ ಗಣಪತಿಯ ವಿಸರ್ಜನೆಗೆ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿರುವ ಅಧಿಕಾರಿಗಳು, ವಿಸರ್ಜನೆಗೆ ಬಳಸಲಾಗುವ ಮುಖ್ಯರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರದ ಮೇಲೆ ತಡೆ ಹೇರಿದ್ದಾರೆ. ಕೆಲ ರಸ್ತೆಗಳು ಬಂದ್ ಇರಲಿದ್ದು 55 ರಸ್ತೆಗಳಲ್ಲಿ ವನ್-ವೇ ವ್ಯವಸ್ಥೆಯನ್ನು ಮಾಡಲಾಗಿದೆ. 99 ರಸ್ತೆಗಳ ವಿವಿಧ ಭಾಗಗಳಲ್ಲಿ ವಾಹನಗಳ ಪಾರ್ಕಿಂಗ್ ಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.