ಲಾಲು ಪ್ರಸಾದ್ ಯಾದವ್ ಹಾಗೂ ಪುತ್ರ ತೇಜಸ್ವಿ ಯಾವದ್ (ಸಂಗ್ರಹ ಚಿತ್ರ)
ನವದೆಹಲಿ: ಹೋಟೆಲ್'ಗಳ ಗುತ್ತಿಗೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ರೈಲ್ವೇ ಸಚಿವ ಹಾಗೂ ಆರ್'ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಹಾಗೂ ಪುತ್ರ ತೇಜಸ್ವಿ ಯಾವದ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಗುರುವಾರ ಸಮನ್ಸ್ ಜಾರಿ ಮಾಡಿದೆ.
ಹೋಟೆಲ್ ಗುತ್ತಿಗೆಯಲ್ಲಿ ಅಕ್ರಮ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11 ರಂದು ತನಿಖಾ ದಳದ ಮುಖ್ಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಲಾಲೂಗೆ ತಿಳಿಸಲಾಗಿದೆ.
ಇದರಂತೆ ಪ್ರಕರಣ ಸಂಬಂಧ ಲಾಲೂ ಪುತ್ರ ತೇಜಸ್ವಿ ಯಾದವ್ ಅವರಿಗೂ ಸಿಬಿಐ ಸಮನ್ಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.
ಹೋಟೆಲ್ ಗಳ ಗುತ್ತಿಗೆಯಲ್ಲಿ ಅಕ್ರಮ ನಡೆಸಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಲಾಲೂ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಇಂಚಿಂಚೂ ಶೋಧ ನಡೆಸಿದ್ದರು.
ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ, ಪುತ್ರ ಬಿಹಾರ ಡಿಸಿಎಂ ತೇಜಸ್ವಿ, ಎಂಡಿ. ಪಿ.ಕೆ. ಗೋಯಲ್, ಲಾಲೂ ಅವರ ಆಪ್ತ ಗೆಳೆಯ ಪ್ರೇಮ್ ಚಂದ್ರ ಗುಪ್ತಾ ಪತ್ನಿ ಸುಜಾತಾ ಮತ್ತಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಅಧಿಕಾರಿಗಳು, ಏಕಕಾಲದಲ್ಲಿ ದೆಹಲಿ, ಪಾಟ್ನಾ, ರಾಂಚಿ, ಪುರಿ, ಗುರ್ ಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
2006ರಲ್ಲಿ ಬಿಎನ್ ಆರ್ ಹೋಟೆಲ್ ಗಳ ನಿರ್ವಹಣೆಗೆ ಸುಜಾತಾ ಹೋಟೆಲ್ ಗಳಿಗೆ ನೀಡಿದ್ದ ಗುತ್ತಿಗಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಲಾಲೂ ಪ್ರಸಾದ್ ವಿರುದ್ದ ಕೇಳಿ ಬಂದಿತ್ತು. ಸುಜಾತಾ ಹೋಟೆಲ್ ಗಳನ್ನು ಐಆರ್ ಸಿಟಿಸಿ ಮತ್ತು ಸಾರ್ವಜನಿಕ ರೈಲ್ವೇ ಇಲಾಖೆ ಪ್ರಸಕ್ತ ವರ್ಷಾರಂಭದಲ್ಲಿ ತನ್ನ ಅಧೀನಕ್ಕೆ ಪಡೆದುಕೊಂಡಿದೆ.