ಶಾಲೆ ಬಸ್(ಸಾಂದರ್ಭಿಕ ಚಿತ್ರ)
ಗುರುಗ್ರಾಮ: ಗುರುಗ್ರಾಮದ ಸೋಹ್ನಾ ಪ್ರದೇಶದಲ್ಲಿರುವ ರಿಯಾನ್ ಇಂಟರ್ ನ್ಯಾಷನಲ್ ಶಾಲೆಯ ಶೌಚಾಲಯದಲ್ಲಿ 2ನೇ ತರಗತಿಯ ವಿದ್ಯಾರ್ಥಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 8.30ರ ಸುಮಾರಿಗೆ ಪ್ರಧುಮಾನ್ ಥಾಕೂರ್(7 ವರ್ಷ) ಎಂಬ ವಿದ್ಯಾರ್ಥಿ ಶಾಲೆಯ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ ಇತರೆ ವಿದ್ಯಾರ್ಥಿಗಳು ಕೂಡಲೇ ತಮ್ಮ ಶಿಕ್ಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.
ಪೊಲೀಸರ ತಂಡ ಮತ್ತು ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿದ್ದು, ಸ್ಥಳದಲ್ಲಿದ್ದ ಒಂದು ಚಾಕುವನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಗುರುಗ್ರಾಮ ಪೊಲೀಸ್ ಪಿಆರ್ಒ ರವೀಂದ್ರ ಕುಮಾರ್ ಅವರು ತಿಳಿಸಿದ್ದಾರೆ.
ಎಲ್ಲಾ ಕೋನಗಳಿಂದಲೂ ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಪೊಲೀಸರು ಶಾಲಾ ಆವರಣದಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಥಾಕೂರ್ ಕ್ಲಾಸ್ ಮೆಟ್ ಗಳನ್ನು ಮತ್ತು ಕೆಲ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.