ದೇಶ

ಡೇರಾದಲ್ಲಿ ಐಷಾರಾಮಿ ಕಾರು, ಹಳೆ ನೋಟ್ ಜಪ್ತಿ, ರೂಮ್ ಗಳಿಗೆ ಬೀಗ ಜಡಿದ ಅಧಿಕಾರಿಗಳು

Lingaraj Badiger
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಾಬಾ ರಾಮ್ ರಹೀಮ್ ಗುರ್ಮಿತ್ ಸಿಂಗ್ ರ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌಧದ ಆಶ್ರಮದಲ್ಲಿ ನೋಂದಣಿಯಾಗದ ಐಷಾರಾಮಿ ಕಾರು ಹಾಗೂ ನಿಷೇಧಿತ ನೋಟ್ ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಅಲ್ಲಿನ ಕೆಲವು ರೂಮ್ ಗಳಿಗೆ ಬೀಗ ಜಡಿದಿರುವುದಾಗಿ ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಡೇರಾ ಆಶ್ರಮದ ಮೇಲೆ ದಾಳಿ ನಡೆಸಿದ್ದ ಜಿಲ್ಲಾಡಳಿತ ಹಾಗೂ ಭದ್ರತಾ ಪಡೆಗಳು, ಹೈಕೋರ್ಟ್ ಆದೇಶದಂತೆ ಆಶ್ರಮದಲ್ಲಿ ಶೋಧಕಾರ್ಯ ನಡೆಸಿದವು. ಈ ವೇಳೆ ನೋಂದಣಿಯಾಗದ ಐಷಾರಾಮಿ ಕಾರೊಂದು ಹಾಗೂ ನಿಷೇಧಿತ ನೋಟ್ ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹರಿಯಾಣ ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಸತೀಶ್ ಮೆಹ್ರಾ ಅವರು ಹೇಳಿದ್ದಾರೆ.
ಆಶ್ರಮದಲ್ಲಿನ ಕೆಲವು ರೂಮ್ ಗಳಿಗೆ ಬೀಗ್ ಜಡಿಯಲಾಗಿದೆ. ಕಂಪ್ಯೂಟರ್ ಹಾರ್ಡ್ ಡಿಸ್ಕ್, ನೋಂದಣಿಯಾಗದ ಕಾರು, ಒಬಿ ವ್ಯಾನ್, 7 ಸಾವಿರ ರುಪಾಯಿ ಮೌಲ್ಯದ ನಿಷೇಧಿತ ನೋಟ್ ಹಾಗೂ 12 ಸಾವಿರ ರುಪಾಯಿ ನಗದು ಮತ್ತು ಲೇಬಲ್ ಇಲ್ಲದ ಕೆಲವು ಔಷಧಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೆಹ್ರಾ ಅವರು ತಿಳಿಸಿದ್ದಾರೆ.
ಪೊಲೀಸರು ಮತ್ತು ಸೇನಾಪಡೆಯ ಭಾರಿ ಭದ್ರತೆಯೊಂದಿಗೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಡೇರಾ ಸಚ್ಚಾ ಸೌದದ ಆಶ್ರಮವನ್ನು ಶೋಧಿಸಿದ್ದಾರೆ. ಇದಲ್ಲದೇ ಆಶ್ರಮಕ್ಕೆ ಬಾಂಬ್ ನಿಷ್ಕ್ರಿಯ ದಳಗಳು ಹಾಗೂ  ಶ್ವಾನದಳಗಳೂ ಕೂಡ ಪ್ರವೇಶ ಮಾಡಿದ್ದವು. 
ಇನ್ನು ಆಶ್ರಮದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಡೇರಾ ಸಚ್ಚಾ ಆಶ್ರಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಆಶ್ರಮ  ಪ್ರವೇಶಿಸುವ ಭಕ್ತರನ್ನು ತೀವ್ರ ಶೋಧಕ್ಕೆ ಒಳಪಡಿಸಲಾಗಿತ್ತು.
SCROLL FOR NEXT