ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಬ್ಬ ವ್ಯಕ್ತಿಯ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ ಎಂದರೆ ಅದರ ಅರ್ಥ ಆ ವ್ಯಕ್ತಿಗೆ ಅವರು 'ನಡತೆಯ ಪ್ರಮಾಣಪತ್ರ'ವನ್ನು ನೀಡುತ್ತಿದ್ದಾರೆಂದಲ್ಲ ಎಂದು ಬಿಜೆಪಿ ಗುರುವಾರ ಹೇಳಿದೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಮರ್ಥಿಸಿ ನಿಖೀಲ್ ದಧೀಚಿ ಎಂಬುವವರು ಅತ್ಯಂತ ಕೆಟ್ಟದಾಗಿ ಟ್ವೀಟ್ ಮಾಡಿದ್ದರು. ನಿಖಿಲ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟ್ಟರ್ ನಲ್ಲಿ ಫಾಲೋಮಾಡುತ್ತಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ 'ಬ್ಲಾಕ್ ನರೇಂದ್ರ ಮೋದಿ' ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
ವಿವಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವ್ಯಕ್ತಿಯೊಬ್ಬರ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆಂದರೆ, ಅದು ಆ ವ್ಯಕ್ತಿಗೆ ಸನ್ನಡತೆಯ ಪ್ರಮಾಣ ಪತ್ರವಾಗುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ದೇಶದ ಪ್ರಧಾನಮಂತ್ರಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಂಬುವ, ಪ್ರೋತ್ಸಾಹ, ಆದ್ಯತೆ ನೀಡುವ ವಿರಳ ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ವರೆಗೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯಾರನ್ನೂ ಬ್ಲಾಕ್ ಅಥವಾ ಅನ್ ಫಾಲೋ ಮಾಡಿಲ್ಲ ಎಂದು ತಿಳಿಸಿದ್ದಾರೆ.