ದೇಶ

ಗುರುಗಾಂವ್ ಶಾಲಾ ಬಾಲಕನ ಹತ್ಯೆ ಪ್ರಕರಣ: ಪ್ರಾಂಶುಪಾಲ ಅಮಾನತು, ಮುಂದುವರೆದ ಪೋಷಕರ ಪ್ರತಿಭಟನೆ

Manjula VN
ಗುರುಗಾಂವ್: ಗುರುಗಾಂವ್ ಶಾಲಾ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ. 
ನಿನ್ನೆಯಷ್ಟೇ ರಿಯಾನ್ ಇಂಟರ್ ನ್ಯಾಷನಲ್ ಶಾಲೆಯ ಶೌಚಾಲಯದಲ್ಲಿ 7 ವರ್ಷದ ಬಾಲಕನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. 
ಪ್ರಕರಣ ಸಂಬಂಧ ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಾಲಕನ ಪೋಷಕರು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಲಕನ ತಂದೆ ವಕೀಲರೊಂದಿಗೆ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಸಂತ್ರಸ್ತ ಬಾಲಕನ ಪರ ವಕೀಲ, ಅಧಿಕಾರಿಗಳು ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. 
ಬಾಲಕನ ಹತ್ಯೆ ಕುರಿತಂತೆ ಪ್ರತಿಕ್ರಯೆ ನೀಡಿರುವ ಗುರುಗ್ರಾಮದ ಡಿಸಿಪಿ, ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲರನ್ನ ಅಮಾನತು ಮಾಡಲಾಗಿದೆ. ಶೀಘ್ರದಲ್ಲಿಯೇ ಶಾಲಾ ಭದ್ರತಾ ಸಿಬ್ಬಂದಿಗಲ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ದೀಪಕ್ ಮಥುರ್ ಅವರು ಮಾತನಾಡಿ, ಬಾಲಕನ ಕುತ್ತಿಗೆಯನ್ನು ಎರಡು ಬಾರಿ ಚೂರಿಯಿಂದ ಇರಿಯಲಾಗಿದೆ. ಕುತ್ತಿಗೆಯ ಭಾಗ ಸಂಪೂರ್ಣವಾಗಿ ಸೀಳಲಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ. 
SCROLL FOR NEXT