ದೇಶ

ಮಕ್ಕಳು 3 ಕಿ.ಮೀ ನಡೆದುಕೊಂಡು ಶಾಲೆಗೆ ಹೋಗಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Sumana Upadhyaya
ನವದೆಹಲಿ: ಮಕ್ಕಳು ಮೂರ್ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಶಾಲೆಗೆ ಹೋಗಬೇಕೆಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಕ್ಕಳ ಶಿಕ್ಷಣದ ಹಕ್ಕನ್ನು ಅರ್ಥಪೂರ್ಣಗೊಳಿಸಲು, ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಮೂರು ಕಿಲೋ ಮೀಟರ್ ಗಿಂತ ಹೆಚ್ಚು ನಡೆದುಕೊಂಡು ಹೋಗುವ ಪರಿಸ್ಥಿತಿ ಇರಬಾರದೆಂದು ಅದು ಹೇಳಿದೆ.
ದೇಶದಲ್ಲಿ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ ರಾಜ್ಯವಾದ ಕೇರಳದಲ್ಲಿ  ಪ್ರಾಥಮಿಕ ಹಂತವನ್ನು ಉನ್ನತ ದರ್ಜೆಗೇರಿಸಲು ಅಂದರೆ ತರಗತಿಯನ್ನು ವಿಸ್ತರಿಸಲು ಶಾಲೆಯೊಂದಕ್ಕೆ ಅನುಮತಿ ನೀಡಲಾಗಿತ್ತು. ಇದನ್ನು ಇನ್ನೊಂದು ಶಾಲೆಯ ಆಡಳಿತ ಮಂಡಳಿ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ವಿಷಯ ಹೇಳಿದೆ.
ಕೇರಳದ ಪರಪ್ಪನಂಗಡಿ ಪಟ್ಟಣದಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು 5ನೇ ತರಗತಿಗೆ ಹೋಗಲು ಮೂರ್ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. 
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ, 10ರಿಂದ 14ನೇ ವರ್ಷದ ಮಕ್ಕಳು ದಿನನಿತ್ಯ ಮೂರ್ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕೆಂದು ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸಂವಿಧಾನ ವಿದಿ 21ಎಯಡಿ 14 ವರ್ಷದವರೆಗೆ ಶಿಕ್ಷಣದ ಹಕ್ಕು ಮಕ್ಕಳ ಮೂಲಭೂತ ಹಕ್ಕಾಗಿದೆ. ಇಂತಹ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ತೆರೆಯಬೇಕು.ಮಕ್ಕಳು ಮೂರ್ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಶಾಲೆಗೆ ಹೋಗಿ ಕಲಿಯಬೇಕಾದ ಪರಿಸ್ಥಿತಿ ಬರಬಾರದು ಎಂದು  ನ್ಯಾಯಪೀಠ ಹೇಳಿದೆ.
ಈ ಶಾಲೆಯ ತರಗತಿಯನ್ನು 8ನೇ ತರಗತಿಯವರೆಗೆ ವಿಸ್ತರಿಸಲು ಕೇರಳ ಸರ್ಕಾರ 2015 ಜೂನ್ ನಲ್ಲಿ ಅನುಮತಿ ನೀಡಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಮತ್ತೊಂದು ಶಾಲೆ ಹೈಕೋರ್ಟ್ ನಲ್ಲಿ ದಾವೆ ಹೂಡಿತ್ತು. 
SCROLL FOR NEXT