ಚಂಡೀಘಡ: ಸ್ವಯಂಘೋಷಿತ ದೇವಮಾನವ ಅತ್ಯಾಚಾರಿ ಬಾಬಾ ರಾಮ್ ರಹೀಂ ಸಿಂಗ್ ನ ಸಿರ್ಸಾದ ಡೇರಾ ಸಚ್ಚಾಸೌಧ ಆಶ್ರಮದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಭಾನುವಾರ ಅಂತ್ಯಗೊಂಡಿದೆ.
ಪಂಜಾಬ್ ಹರ್ಯಾಣ ಹೈಕೋರ್ಟ್ ನಿರ್ದೇಶನದ ಮೇರೆಗೆ ಯೋಧರ ಸಾಥ್ ಪಡೆದ ಹರ್ಯಾಣ ಪೊಲೀಸರು ಕಳೆದ ಶುಕ್ರವಾರದಿಂದಲೂ ಸಿರ್ಸಾ ಆಶ್ರಮದಲ್ಲಿ ವ್ಯಾಪಕ ಶೋಧ ಕಾರ್ಯಾತಚರಣೆ ನಡೆಸುತ್ತಿದ್ದರು. ಭಾನುವಾರ ಸಂಜೆ ವೇಳೆಗೆ ಆಶ್ರಮದ ಶೋಧ ಕಾರ್ಯಾಚರಣೆ ಮುಕ್ತಾಯವಾಗಿದೆ ಎಂದು ಹರ್ಯಾಣ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಮೆಹ್ರಾ ತಿಳಿಸಿದ್ದಾರೆ.
ಈ ಬಗ್ಗೆ ಆಶ್ರಮದ ಆವರಣದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಮೆಹ್ರಾ ಅವರು, ಹೈಕೋರ್ಟ್ ಆದೇಶದಂತೆ ಆಶ್ರಮದಲ್ಲಿನ ಶೋಧಕಾರ್ಯಾಚರಣೆ ಪೂರ್ಣವಾಗಿದೆ. ನಾಳೆ ಶೋಧ ಕಾರ್ಯಾಚರಣೆಯ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಅಂತೆಯೇ ಆಶ್ರಮಕ್ಕೆ ಒದಗಿಸಲಾಗಿರುವ ಭದ್ರತೆಯನ್ನು ಮುಂಜಾಗ್ರತಾ ಕ್ರಮವಾಗಿ ಮತ್ತೊಂದಿಷ್ಟು ದಿನ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಸಿರ್ಸಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದ್ದ ಎಸ್ ಎಂಎಸ್, ಇಂಟರ್ ನೆಟ್, ರೈಲ್ವೇ ಸೇವೆಗಳನ್ನು ನಾಳೆಯಿಂದಲೇ ಪುನಾರಂಭ ಮಾಡುವುದಾಗಿಯೂ ಸತೀಶ್ ಮೆಹ್ರಾ ತಿಳಿಸಿದರು.