ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ನವದೆಹಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ನೀಡಲಾಗಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ, ಶೀಘ್ರಗತಿಯಲ್ಲಿ ತನಿಖೆ ನಡೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ನೀಡಲಾಗಿದ್ದ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಾಗಿ ಆರ್ಥೈಸುವ ಅಗತ್ಯವಿಲ್ಲ. ಪ್ರಕರಣ ಸಂಬಂಧ ಪಕ್ಷಪಾತ ನಡೆಸದೆಯೇ ಶೀಘ್ರಗತಿಯಲ್ಲಿ ತನಿಖೆ ನಡೆಸುತ್ತೇವೆ, ನ್ಯಾಯ ಒದಗಿಸುತ್ತೇವೆಂದು ಕೇಂದ್ರಕ್ಕೆ ಭರವಸೆ ನೀಡಬೇಕಿದೆ ಎಂದು ಹೇಳಿದ್ದಾರೆ.
ಬೆದರಿಕೆಗಳಿದ್ದರೂ ಗೌರಿ ಲಂಕೇಶ್'ಗೇಕೆ ಭದ್ರತೆ ನೀಡಲಿಲ್ಲ ಎಂಬುದನ್ನು ನಾನು ಪ್ರಶ್ನೆ ಮಾಡಿದ್ದೆ. ಇದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಾನು ಕೇಳಿದ್ದ ಪ್ರಶ್ನೆಯಾಗಿತ್ತು. ಗೌರಿಯವರಿಗೆ ಭದ್ರತೆ ನೀಡಲಾಗಿತ್ತೋ ಅಥವಾ ಇಲ್ಲವೋ ಎಂಬುದರನ್ನು ನಾನು ಪ್ರಶ್ನೆ ಮಾಡಿದ್ದೆ. ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರ ಪಕ್ಷಪಾತ ಮಾಡದೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ವಿಶ್ವಾಸವಿಟ್ಟಿದ್ದೇನೆಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಬಿಜೆಪಿ ಹಾಗೂ ಆರ್'ಎಸ್ಎಸ್ ವಿರುದ್ದ ಕೇಳಿ ಬರುತ್ತಿದ್ದ ಆರೋಪಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದ ರವಿಶಂಕರ್ ಪ್ರಸಾದ್ ಅವರು, ನಕ್ಸಲರಿಗೆ ಗೌರಿ ಲಂಕೇಶ್ ಅವರ ಮೇಲೆ ಕೋಪವಿತ್ತು. ಅನಾವಶ್ಯವಕಾಗಿ ಆರ್'ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಮಾತನಾಡಬಾರದು. ಗೌರಿ ಲಂಕೇಶ್ ಅವರ ಜೀವಕ್ಕೆ ಬೆದರಿಕೆಯಿದ್ದರೂ ಕರ್ನಾಟಕ ಸರ್ಕಾರವೇಕೆ ಅವರಿಗೆ ಸೂಕ್ತ ಭದ್ರತೆಯನ್ನು ಕೊಟ್ಟಿರಲಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಪತ್ರಕರ್ತೆಯ ಜೀವಕ್ಕೆ ಬೆದರಿಕೆಯಿದ್ದರೂ ಅವರಿಗೆ ಭದ್ರತೆ ನೀಡುವಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪ್ರಕರಣವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೌರಿಯವರಿಕೆ ಬೆದರಿಕೆ ಇದ್ದ ಕುರಿತು ರಾಜ್ಯ ಸರ್ಕಾರಕ್ಕೂ ಮಾಹಿತಿ ಇರಲಿಲ್ಲ. ಬದೆರಿಗೆ ಬಗ್ಗೆ ಗೊತ್ತಿದ್ದರೂ ರಾಜ್ಯ ಸರ್ಕಾರ ಏನು ಮಾಡುತ್ತಿತ್ತು. ಪ್ರಸಾದ್ ಅವರು ಪ್ರಶ್ನಿಸಿರುವುದು ಬೇಜವಾಬ್ದಾರಿಯ ಹೇಳಿಕೆ, ಗೌರಿಯವರಿಗೆ ಬೆದರಿಕೆ ಇದ್ದ ಬಗ್ಗೆ ಸರ್ಕಾರಕದ ಗಮನಕ್ಕೆ ತಂದಿದ್ದರೆ ಭದ್ರತೆಯ ನೀಡುತ್ತಿದ್ದೆವು. ಹತ್ಯೆಯ ಬಗ್ಗೆ ನಾನು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು.