ದೇಶ

ತಾಯಿ ಮತ್ತು ಶ್ರವಣ ದೋಷವುಳ್ಳ ಮಗನ ಯಶಸ್ಸಿನ ಕಥೆಯಿದು...

Sumana Upadhyaya

ಚೆನ್ನೈ: 30 ವರ್ಷಗಳ ಹಿಂದೆ ತನ್ನ ಕೈಯಿಂದ ಜಾರಿದ ತಟ್ಟೆ ತನ್ನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ಗಾಯತ್ರಿ ರವೀಶ್ ಎಣಿಸಿರಲಿಲ್ಲ. ಆಗ ಅವರು ವಾಸಿಸುತ್ತಿದ್ದುದು ಕರ್ನಾಟಕದ ತುಮಕೂರಿನಲ್ಲಿ.ಅವರ ಒಬ್ಬನೇ ಒಬ್ಬ ಮಗ ಅವನೀಶ್ 11 ತಿಂಗಳ ಮಗುವಾಗಿದ್ದಾಗ ಗಾಯತ್ರಿ ಅವರ ಕೈಯಿಂದ ಪ್ಲೇಟ್ ಬಿದ್ದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಂತೆ. ಅಳಲೂ ಇಲ್ಲವಂತೆ. ಆಗಲೇ ಗೊತ್ತಾಗಿದ್ದು ಗಾಯತ್ರಿಯವರಿಗೆ ತಮ್ಮ ಮಗನಿಗೆ ಕಿವುಡು ಸಮಸ್ಯೆಯಿದೆಯೆಂದು. ಹಾಗೆಂದು ಅವರು ಗಾಬರಿಯಾಗಲಿಲ್ಲ, ಜೀವನದಲ್ಲಿ ನಿರಾಶರಾಗಲಿಲ್ಲ. ಮಗನ ಶಾರೀರಿಕ ದೌರ್ಬಲ್ಯವನ್ನು ಸವಾಲಾಗಿ ಸ್ವೀಕರಿಸಿದರು.

ಅದಾಗಿ 5 ವರ್ಷಗಳು ಕಳೆದ ನಂತರ ಗಾಯತ್ರಿ ಶ್ರವಣದೋಷದಲ್ಲಿ ಡಿಎಡ್ ಕೋರ್ಸ್ ಮಾಡಿದರು. ಶಿಕ್ಷಕಿಯಾದರು. ತಮ್ಮ ಮಗನೇ ಗಾಯತ್ರಿಯವರ ಮೊದಲ ವಿದ್ಯಾರ್ಥಿ. ಆದರೆ ಆತನೇ ಕೊನೆಯವನಲ್ಲ.

1997ರಲ್ಲಿ, ಗಾಯತ್ರಿಯವರು ಶ್ರವಣದೋಷವುಳ್ಳ ಪೋಷಕರು ಮತ್ತು ಮಕ್ಕಳಿಗಾಗಿ ಹೆಲೆನ್ ಕೆಲ್ಲರ್ ಇಂಟಗ್ರೇಟೆಡ್ ಎಜುಕೇಶನಲ್ ಸೊಸೈಟಿಯನ್ನು ಪ್ರಾರಂಭಿಸಿದರು. ಆ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.ಶ್ರವಣದೋಷವುಳ್ಳ ಮಕ್ಕಳಿಗೆ ಮೂಲ ತರಬೇತಿಯಿಂದ ಹಿಡಿದು ಸಮಾಜದಲ್ಲಿ ಎಲ್ಲರಂತೆ ಜೀವನ ನಡೆಸಲು ಅಗತ್ಯ ವಿಷಯಗಳನ್ನು ಈ ಶಿಕ್ಷಣ ಸಂಸ್ಥೆ ಒದಗಿಸುತ್ತದೆ.

ಶ್ರವಣದೋಷವುಳ್ಳ ಮಕ್ಕಳಿಗೆ ಕಲಿಕೆಯಲ್ಲಿ ವ್ಯತ್ಯಾಸವಿರಬಹುದು. ಪೋಷಕರು ನೀಡುವ ಹಣದಿಂದ ಗಾಯತ್ರಿ ಈ ಶಿಕ್ಷಣ ಸಂಸ್ಥೆ ನಡೆಸುತ್ತಾರೆ.
ಅವರ ಪುತ್ರ ಅವನೀಶ್ ಬೆಂಗಳೂರಿನ ವಿಶೇಷ ಮಕ್ಕಳ ಶಾಲೆಯಲ್ಲಿ ಮತ್ತು ಚೆನ್ನೈಯ ಲಿಟ್ಲ್ ಫ್ಲವರ್ ವಿಶೇಷ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು. ತುಮಕೂರಿನ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಮತ್ತು ಎಲ್ಲರು ಓದುವ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಪೂರೈಸಿದ್ದಾರೆ.
ಅವನೀಶ್ ಇಂದು ಚನ್ನಬಸವೇಶ್ವರ ತಾಂತ್ರಿಕ ಸಂಸ್ಥೆಯಲ್ಲಿ ಕಂಪ್ಯೂಟರ್ ಟೆಕ್ನಿಷಿಯನ್ ಆಗಿದ್ದು ಮದುವೆಯಾಗಿದ್ದಾರೆ.

SCROLL FOR NEXT