ಲಂಡನ್ : ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ ದಾವೂದ್ ಇಬ್ರಾಹಿಂ ಒಡೆತನದ 6.7 ಬಿಲಿಯನ್ ದಾಲರ್ ಮೌಲ್ಯದ ಆಸ್ತಿಯನ್ನು ಬ್ರಿಟನ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
2015ರಲ್ಲಿ ಭಾರತ ಸರ್ಕಾರ ಲಂಡನ್ ನಲ್ಲಿ ಇರುವ ದಾವೂದ್ ನ ಆಸ್ತಿಗಳ ಸಮಗ್ರ ಮಾಹಿತಿಯನ್ನು ಬ್ರಿಟನ್ ಸರ್ಕಾರಕ್ಕೆ ನೀಡಿತ್ತು.
ಪಾಕಿಸ್ಥಾನದ ಕರಾಚಿಯಲ್ಲಿ ಮೂರು ಅಧಿಕೃತ ವಿಳಾಸಗಳಲ್ಲಿ ನೆಲೆಸಿದ್ದಾನೆ ಎಂದು ತಿಳಿಯಲಾಗಿರುವ ದಾವೂದ್ ಗೆ ಬ್ರಿಟನ್‌ನಲ್ಲಿ ಭಾರಿ ಆಸ್ತಿಗಳಿವೆ. ಅದರಲ್ಲಿ 6.7 ಬಿಲಿಯನ್ ದಾಲರ್ ಮೌಲ್ಯದ ಆಸ್ತಿಯನ್ನು ಇದೀಗ ಬ್ರಿಟನ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಬ್ರಿಟನ್ ನ ವಾರ್ಕ್ ವಿಕ್ ಶಯರ್ ನಲ್ಲಿ ದಾವೂದ್ ಗೆ ಸೇರಿದ ಬೃಹತ್ ಹೊಟೇಲ್ ಇದೆ. ಅಂತೆಯೇ ಮಿಡ್ ಲ್ಯಾಂಡ್ಸ್ ಆದ್ಯಂತ ಆತನಿಗೆ ಸೇರಿದ ಹಲವಾರು ವಸತಿ ಸಮುಚ್ಚಯಗಳು ಇವೆ ಎಂದು ತಿಳಿದು ಬಂದಿದೆ. ದಾವೂದ್ ಗೆ ಅಲ್ ಕೈದಾ ನಂಟು ಇರುವುದು ಬಹಿರಂಗವಾಗಿದೆ.
ಬ್ರಿಟನ್ ಸರ್ಕಾರ ಸಿದ್ಧಪಡಿಸಿರುವ ಹಣಕಾಸು ನಿಷೇಧಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಪ್ರಜೆಯಾಗಿರುವ ದಾವೂದ್ 21 ಬೇರೆ ಬೇರೆ ಹೆಸರನ್ನು ಹೊಂದಿರುವ ಭೂಗತ ಜಗತ್ತಿನ ಡಾನ್ ಆಗಿದ್ದಾನೆ. 1993 ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಅಂದಿನಿಂದಲೂ ಆತ ತಲೆಮರೆಸಿಕೊಂಡಿದ್ದಾನೆ.