ದೇಶ

ಇಸಿಸ್ ಉಗ್ರರು ಅಪಹರಿಸಿದ್ದ ಕೇರಳ ಪಾದ್ರಿ ಬಿಡುಗಡೆಗೆ ಹಣ ನೀಡಿಲ್ಲ: ಸರ್ಕಾರ

Lingaraj Badiger
ತಿರುವನಂತಪುರಂ: ಐಎಸ್ಐಎಸ್ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದ ಕೇರಳದ ಪಾದ್ರಿ ಟಾಮ್‌ ಉಳುನ್ನಲಿಲ್‌ ಅವರ ಬಿಡುಗಡೆಗಾಗಿ ಯಾವುದೇ ಹಣ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿಕೆ ಸಿಂಗ್ ಅವರು, ಕೇರಳದ ಪಾದ್ರಿಯ ಬಿಡುಗಡೆಗಾಗಿ ವಿದೇಶಾಂಗ ಸಚಿವಾಲಯ ಸದ್ದಿಲ್ಲದೆ ಕೆಲಸ ಮಾಡಿದೆ. ಆದರೆ ಅಂತಿಮವಾಗಿ ಯಶಸ್ವಿಯಾಗಿದೆ ಎಂದಿದ್ದಾರೆ.
ಇದೇ ವೇಳೆ ಪಾದ್ರಿ ಬಿಡುಗಡೆಗಾಗಿ ಹಣ ನೀಡಿದ್ದೀರಾ? ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿದ ಸಚಿವರು, ಇಲ್ಲ ಯಾವುದೇ ಹಣ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಕೇರಳ ಮೂಲದ ಪಾದ್ರಿಯನ್ನು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಕ್ಕೆ ನಮಗೆ ಸಂತೋಷವಾಗಿದೆ ಎಂದಿದ್ದಾರೆ.
2016ರ ಮಾರ್ಚ್‌ 6ರಂದು ಕ್ರೈಸ್ತ ಧರ್ಮ ಪ್ರಚಾರಕ ಸಮಿತಿಗೆ ಸೇರಿದ ಶಾಲೆ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ ಪಾದ್ರಿ ಟಾಮ್‌ ಉಳುನ್ನಲಿಲ್‌ (56) ಅವರನ್ನು ಅಪಹರಿಸಿದ್ದರು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮವೊಂದರ ಮೇಲೆ ದಾಳಿ ನಡೆಸಿ 16 ಮಂದಿಯನ್ನು ಕೊಂದಿದ್ದರು.
ಒಮನ್‌ನ ಸುಲ್ತಾನ್ ಖಬೂಸ್‌ ಅವರ ಮನವಿಯ ಮೇರೆಗೆ ಒಮನ್ ಹಾಗೂ ಯೆಮನ್‌ ಅಧಿಕಾರಿಗಳು ಪಾದ್ರಿ ಬಿಡುಗಡೆಗೆ ಶ್ರಮಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ 2016ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡಿದ್ದ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಪಾದ್ರಿ, ತಮ್ಮ ಸುರಕ್ಷಿತ ಬಿಡುಗಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೋಪ್ ಫ್ರಾನ್ಸಿಸ್‌ ಅವರಿಗೆ ಮನವಿ ಮಾಡಿದ್ದರು.
SCROLL FOR NEXT