ದೇಶ

ಶಾಲಾ ಹಾಜರಾತಿ ಹೇಳುವಾಗ ವಿದ್ಯಾರ್ಥಿಗಳು 'ಜೈಹಿಂದ್' ಎನ್ನಬೇಕು: ಮಧ್ಯಪ್ರದೇಶ ಶಿಕ್ಷಣ ಸಚಿವ

Manjula VN

ನವದೆಹಲಿ: ಶಾಲೆಗಳಲ್ಲಿ ಹಾಜರಾತಿ ಹೇಳುವಾಗ ವಿದ್ಯಾರ್ಥಿಗಳು ಯಸ್ ಸಾರ್, ಪ್ರೆಜೆಂಟ್ ಮೇಡಂ ಬದಲಿಗೆ 'ಜೈಹಿಂದ್' ಎಂದು ಹೇಳಬೇಕೆಂದು ಮಧ್ಯಪ್ರದೇಶ ಶಾಲಾ ಶಿಕ್ಷಣ ಸಚಿವ ವಿಜಯ್ ಶಾ ಬುಧವಾರ ಹೇಳಿದ್ದಾರೆ. 

ಚಿತ್ರಕೂಟದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕ, ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿ ಮಾತನಾಡಿರುವ ಅವರು, ಅಕ್ಟೋಬರ್ 1 ರಿಂದ ಸತ್ನಾ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಜರಾತಿ ಹೇಳುವಾಗ ಯಸ್ ಸಾರ್, ಪ್ರೆಜೆಂಟ್ ಮೇಡಂ ಬದಲಿಗೆ 'ಜೈಹಿಂದ್' ಎನ್ನಬೇಕು ಎಂದು ಆದೇಶಿಸಿದ್ದಾರೆ. ಪ್ರಸ್ತುತ ಈ ಆದೇಶ ಸತ್ನಾ ಜಿಲ್ಲೆಯ ಶಾಲೆಗಳಲ್ಲಿ ಪಾಲನೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜಾರಿಗೆ ತರುವುದಾಗಿ ಹೇಳಿದ್ದಾರೆ. 

ಸೇನಾ ಹಿನ್ನಲೆ ಹೊಂದಿರುವ ವ್ಯಕ್ತಿ ನಾನು. ನನ್ನ ಅಜ್ಜ ಸೇನೆಯಲ್ಲಿದ್ದವರು. ನಮ್ಮನ್ನು ನೋಡಲೆಂದು ಮನೆಗೆ ಬಂದಾಗ ಅವರು ಯಾವಾಗಲೂ ಜೈಹಿಂದ್ ಎಂದು ಹೇಳುತ್ತಿದ್ದರು. ದೇಶಕ್ಕೆ ಗೌರವ, ಪ್ರೀತಿ ಕೊಡುವುದಕ್ಕೆ ಇದೊಂದು ಮಾರ್ಗವೆಂದು ನಾನು ತಿಳಿಯುತ್ತಿದ್ದೆ. ಶಾಲೆಗಳಲ್ಲಿ ಹಾಜರಾತಿ ಹೇಳುವ ಮಕ್ಕಳು, ಯಸ್ ಸರ್, ಯಸ್ ಮೇಡಂ ಏನ್ನುವುದು ನನಗಿಷ್ಟವಿಲ್ಲ. ಹೀಗಾಗಿ ಜೈ ಹಿಂದ್ ಎಂದು ಹೇಳುವಂತೆ ಶಾಲೆಗಳಿಗೆ ಸೂಚನೆ ನೀಡಿದ್ದೇನೆ. 

ಮಕ್ಕಳು ದೇಶದ ಭವಿಷ್ಯ. ದೇಶಕ್ಕೆ ಮೇಲೆ ಪ್ರೀತಿ ಹಾಗೂ ಗೌರವವನ್ನು ಮಕ್ಕಳಲ್ಲಿ ಬೆಳೆಸಬೇಕು. ಹಾಜರಾತಿ ವೇಳೆ ಜೈಹಿಂದ್ ಎಂದು ಹೇಳಿಸುವುದರಿಂದ ಅವರಲ್ಲಿ ದೇಶದ ಮೇಲಿನ ಪ್ರೀತಿಯನ್ನು ಹೆಚ್ಚಿಸಿದಂತಾಗುತ್ತದೆ. ಈ ಪ್ರಯೋಗದಲ್ಲಿ ನಾವು ಯಶಸ್ವಿಯಾಗಿದ್ದೇ ಆದರೆ, ಮುಖ್ಯಮಂತ್ರಿಗಳ ಒಪ್ಪಿಗೆಯ ಮೇರೆಗೆ ರಾಜ್ಯದಾದ್ಯಂತ ಆದೇಶವನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ಆದೇಶವನ್ನು ಖಾಸಗಿ ಶಾಲೆಗಳಲ್ಲಿಯೂ ಜಾರಿಗೆ ತರಲಾಗುತ್ತದೆಯೇ ಎಂಬ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿರುವ ಅವರು, ಖಾಸಗಿ ಶಾಲೆಗಳಿಗೆ ನಾವು ಸಲಹೆಯನ್ನಷ್ಟೇ ನೀಡಬಹುದು. ಸಲಹೆ ಬಳಿಕ ಅವರು ಯಾವ ಮಟ್ಟಕ್ಕೆ ಅನುಸರಿಸುತ್ತಾರೆಂಬುದು ಅವರಿಗೆ ಬಿಟ್ಟ ವಿಚಾರ. ಇದೊಂದು ರಾಷ್ಟ್ರೀಯವಾದಿ ಮಾರ್ಗವಾಗಿದ್ದು, ಇದನ್ನು ಪರಿಗಣಿಸಬೇಕು ಎಂದಿದ್ದಾರೆ. 
SCROLL FOR NEXT