ನವದೆಹಲಿ: ಏರ್ ಸೆಲ್ - ಮ್ಯಾಕ್ಸಿಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಸಮನ್ಸ್ ನೀಡುವ ಅಧಿಕಾರ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ಇಲ್ಲ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಗುರುವಾರ ಸಿಬಿಐಗೆ ಪತ್ರ ಬರೆದು ತಿಳಿಸಿದ್ದಾರೆ.
ಏರ್ ಸೆಲ್ - ಮ್ಯಾಕ್ಸಿಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೆ ಸಿಬಿಐ ಕಾರ್ತಿಗೆ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐಗೆ ಪತ್ರ ಬರೆದಿರುವ ಕಾರ್ತಿ ಚಿದಂಬರಂ ಅವರು, ಫೆಬ್ರವರಿ 2, 2017ರಂದು ನೀಡಿದ ನೋಟಿಸ್ ಪ್ರಕಾರ, ಈ ಪ್ರಕರಣದಲ್ಲಿ ತಮಗೆ ಸಮನ್ಸ್ ಜಾರಿ ಮಾಡುವ ಅಧಿಕಾರಿ ತನಿಖಾ ಸಂಸ್ಥೆಗೆ ಇಲ್ಲ ಎಂದಿದ್ದಾರೆ.
ಏರ್ ಸೆಲ್ - ಮ್ಯಾಕ್ಸಿಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಮತ್ತು ಅದರ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಆ ಕುರಿತು ನಾನು ಯಾವುದೇ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಕಾರ್ತಿ ಚಿದಂಬರಂ ಅವರು ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಏರ್ ಸೆಲ್ - ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಯಾವುದೇ ಮಹಿತಿ ಅಥವಾ ಸಂಪರ್ಕವನ್ನು ನಾನು ನಿರಾಕರಿಸುತ್ತೇನೆ ಎಂದು ಕಾರ್ತಿ ಹೇಳಿದ್ದಾರೆ. ಕಾರ್ತಿ ಚಿದಂಬರಂ ಪತ್ರವನ್ನು ಓದಿ ಮಾಧ್ಯಮಕ್ಕೆ ತಿಳಿಸಿದ ಅವರ ವಕೀಲರು, ಈ ಕುರಿತು ನನ್ನ ಕಕ್ಷಿದಾರರು ಯಾವುದೇ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಏರ್ ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ ಹಣಕಾಸು ದಾಖಲೆಗಳೊಂದಿಗೆ ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐಗೆ ಕಾರ್ತಿ ಚಿದಂಬರಂಗೆ ಸಮನ್ಸ್ ನೀಡಿತ್ತು.
2015ರಿಂದಲೇ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಕಾರ್ತಿ ಚಿದಂಬರಂ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಏರ್ ಸೆಲ್ -ಮ್ಯಾಕ್ಸಿಸ್ ಸಂಸ್ಥೆಗೆ ವಿದೇಶಿ ಹೂಡಿಕೆ ಪಡೆದುಕೊಳ್ಳಲು ಕಾನೂನುಬಾಹಿರವಾಗಿ ಅನುಮೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಅವರನ್ನು ವಿಚಾರಣೆ ನಡೆಸಲು ಸಿಬಿಐ ಉದ್ದೇಶಿಸಿದೆ.