ದೇಶ

ನವ ಭಾರತ ನಿರ್ಮಾಣಕ್ಕೆ ಬುಲೆಟ್ ರೈಲು ಸಹಕಾರಿ: ಇಂಡೋ-ಜಪಾನ್ ಪ್ರಧಾನಿಗಳ ಜಂಟಿ ಹೇಳಿಕೆ

Srinivasamurthy VN
ಗಾಂಧಿನಗರ: ನವ ಭಾರತ ನಿರ್ಮಾಣಕ್ಕೆ ಬುಲೆಟ್ ರೈಲು ಸಹಕಾರಿಯಾಗಲಿದೆ ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ದೇಶದ ಪ್ರಧಾನಿ ಶಿಂಜೋ ಅಬೆ ಹೇಳಿದ್ದಾರೆ.
2 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇಂದು ಗುಜರಾತ್ ಗಾಂಧಿನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಉಭಯ ದೇಶಗಳು ಹಲವು  ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದು, ರಕ್ಷಣೆ, ಇಂಧನ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ. ಇನ್ನು ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಹೇಳಿಕೆ ನೀಡಿದ ಪ್ರಧಾನಿ ಮೋದಿ ಹಾಗೂ  ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ನವ ಭಾರತ ನಿರ್ಮಾಣಕ್ಕೆ ಬುಲೆಟ್ ರೈಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಇತ್ತೀಚೆಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ನಿಲುವನ್ನು ಭಾರತ ಮತ್ತು  ಜಪಾನ್ ಜಂಟಿಯಾಗಿ ಖಂಡಿಸಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, "ಜಪಾನ್ ಭಾರತದ ಮೂರನೇ ಅತೀ ದೊಡ್ಡ ಹೂಡಿಕೆ ರಾಷ್ಟ್ರವಾಗಿದೆ. ಭಾರತದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುವಂತೆ ನಾನು ಈ ಮೂಲಕ ಜಪಾನ್ ಹೂಡಿಕೆದಾರರಲ್ಲಿ  ಕೇಳಿಕೊಳ್ಳುತ್ತಿದ್ದೇನೆ. ಭಾರತದಲ್ಲಿಯೂ ಹೆಚ್ಚು ಜಪಾನೀಯರು ನೆಲೆಸಿದ್ದು, ಅವರಿಗಾಗಿ ಹೆಚ್ಚೆಚ್ಚು ರೆಸ್ಟೋರೆಂಟ್ ಗಳ ಅಗತ್ಯವಿದೆ. ಹೀಗಾಗಿ ಭಾರತದಲ್ಲಿ ಹೆಚ್ಚೆಚ್ಚು ಜಪಾನ್ ರೆಸ್ಟೋರೆಂಟ್ ಗಳನ್ನು ತೆರೆಯುವಂತೆ ಮನವಿ ಜಪಾನ್  ರೆಸ್ಟೋರೆಂಟ್ ಮಾಲೀಕರಲ್ಲಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಇದೇ ವೇಳೆ ದ್ವಿಪಕ್ಷೀಯ ಮಾತುಕತೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ನವ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದ್ದು, ಇಂದು ಭಾರತ ಮತ್ತು ಜಪಾನ್ ದೇಶಗಳ ನಡುವಿನ  ಒಪ್ಪಂದಗಳನ್ನು ನಾನು ಸ್ವಾಗತಿಸುತ್ತೇನೆ. 2016-17ನೇ ಸಾಲಿನಲ್ಲಿ ಭಾರತದಲ್ಲಿ ಜಪಾನ್ 4.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಜಪಾನ್ ಹೂಡಿಕೆ ಪ್ರಮಾಣ ಶೇ.80ರಷ್ಟು ಏರಿಕೆಯಾಗಿದೆ  ಎಂದು ಪ್ರಧಾನಿ ಮೋದಿ ಹೇಳಿದರು.

ನಿಮ್ಮ ಆತಿಥ್ಯಕ್ಕೆ ಧನ್ಯವಾದ: ಶಿಂಜೋ ಅಬೆ
ಪ್ರಧಾನಿ ಮೋದಿ ಬಳಿಕ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ನಿಮ್ಮ ಸ್ವಾಗತ ಹಾಗೂ ನಿಮ್ಮ ಆತಿಥ್ಯಕ್ಕೆ ನಾನು ಹೃತ್ಪೂರ್ವಕ ವಂದನೆ ತಿಳಿಸುತ್ತೇನೆ. ಜಪಾನ್ ಮತ್ತು ಭಾರತ ಸ್ನೇಹ ಮುಂದುವರೆಯಲಿದ್ದು,  ಮಲಬಾರ್ ನೌಕಾ ತರಬೇತಿ ಮೂಲಕ ಭಾರತ, ಜಪಾನ್ ಮತ್ತು ಅಮೆರಿಕ ದೇಶಗಳ ನಡುವಿನ ಸ್ನೇಹ ಮತ್ತಷ್ಟು ಗಾಢವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT