ನವದೆಹಲಿ: ಬ್ಲೂ ವೇಲ್ ಚಾಲೆಂಜ್ ಗೆ ಸಂಪೂರ್ಣ ನಿಷೇಧವನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಮೂರು ವಾರಗಳಲ್ಲಿ ನೋಟೀಸ್ ಗೆ ಉತ್ತರಿಸುವಂತೆ ಅದು ಕೇಂದ್ರಕ್ಕೆ ಸೂಚಿಸಿದೆ.
ಸೆ.12 ರಂದು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರನ್ನೊಳಗೊಂಡ ಪೀಠ ಬ್ಲೂ ವೇಲ್ ಚಾಲೆಂಜ್ ಕುರಿತ ಮನವಿಯನ್ನು ಶುಕ್ರವಾರ ಆಲಿಸುವುದಾಗಿ ಒಪ್ಪಿಕೊಂಡಿತ್ತು
200 ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಳ್ಳಲು ಕಾರಣವಾದ ಮಾರಣಾಂತಿಕ ಆನ್ ಲೈನ್ ಆಟದ ಮೇಲೆ ನಿಷೇಧ ಹೇರಬೇಕೆಂದು ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಕೇಳಿದ್ದಾರೆ. ಕೋರ್ಟ್, ಆಟವನ್ನು ಸಂಪೂರ್ಣ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ಮನವಿಯಲ್ಲಿ ಕೇಳಲಾಗಿದೆ.
ಮಾರಣಾಂತಿಕ ಬ್ಲೂ ವೇಲ್ ಎನ್ನುವುದು ಅನಾಮಧೇಯ ನಿಯಂತ್ರಕ ನೀಡಿದ ಟಾಸ್ಕ್ ಗಳನ್ನು ಪೂರೈಸುವಂತೆ ಒತ್ತಾಯಿಸಿ 50 ದಿನಗಳವರೆಗೆ ಆಟಗಾರರನ್ನು ಚಾಲೆಂಜ್ ಮಾಡುವ ಆನ್ ಲೈನ್ ಆಟವಾಗಿದೆ.
ಆಟವು ಮೊದಲಿಗೆ ಒಂದು ಕಾಗದದ ಮೇಲೆ ತಿಮಿಂಗಿಲವನ್ನು ಚಿತ್ರಿಸುವುದರಿಂದ ಪ್ರಾರಂಭಗೊಳ್ಳುತ್ತದೆ. ನಂತರ ಅವರ ದೇಹದಲ್ಲಿ ತಿಮಿಂಗಿಲದ ಚಿತ್ರವನ್ನು ಕೆತ್ತಿಕೊಳ್ಳಲು ತಿಳಿಸಲಾಗುತ್ತದೆ, ಬಳಿಕ ಸ್ಪರ್ಧಿಗಳಿಗೆ ಭಯಾನಕ ಚಲನಚಿತ್ರಗಳನ್ನು ನೋಡುವ, ಇತರೆ ಟಾಸ್ಕ್ ಗಳನ್ನು ನೀದಲಾಗುತ್ತದೆ. ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ಇರುತ್ತದೆ.
ರಷ್ಯಾದ ಮನೋವಿಜ್ಞಾನ ವಿದ್ಯಾರ್ಥಿಯಾದ ಫಿಲಿಪ್ ಬುಡೆಕಿನ್ ಅವರು ಈ ಭಯಾನಕ ಆನ್ ಲೈನ್ ಆಟವನ್ನು ರಚಿಸಿದ್ದಾರೆ.