ದೇಶ

ಅಂತರಿಕ್ಷ್-ದೇವಾಸ್ ಒಪ್ಪಂದ: ಮಾಜಿ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಗೆ ಸಮನ್ಸ್

Vishwanath S
ನವದೆಹಲಿ: ಅಂತರಿಕ್ಷ್-ದೇವಾಸ್ ಒಪ್ಪಂದ ಹಗರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯ ಮಾಜಿ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಗೆ ಸಮನ್ಸ್ ನೀಡಿದೆ. 
ಸಿಬಿಐ ಕೋರ್ಟ್ ನ ವಿಶೇಷ ನ್ಯಾಯಾಧೀಶರಾದ ವೀರೇಂದ್ರ ಕುಮಾರ್ ಗೋಯಲ್ ಅವರು ಮಾಧವನ್ ನಾಯರ್, ಎ ಭಾಸ್ಕರ್ ನಾರಾಯಣ್ ರಾವ್ ಮತ್ತು ಆಂಟ್ರಿಕ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಕೆಆರ್ ಶ್ರೀಧರ್ ಮೂರ್ತಿ, ಬಾಹ್ಯಾಕಾಶ ಇಲಾಖೆಯ ಮಾಜಿ ಹೆಚ್ಚುವರಿ ಕಾರ್ಯದರ್ಶಿ ವೀಣಾ ಎಸ್ ರಾವ್ ಮತ್ತು ಇತರರಿಗೆ ಡಿಸೆಂಬರ್ 23ರೊಳಗಾಗಿ ಕೋರ್ಟ್ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ. 
ಈ ಪ್ರಕರಣ ಸಂಬಂಧ ಸಿಬಿಐ ಚಾರ್ಚ್ ಶೀಟ್ ದಾಖಲಿಸಿದ ನಂತರ ವಿಶೇಷ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ. 
2015ರ ಮಾರ್ಚ್ 16ರಲ್ಲಿ ಜಿ ಮಾಧವನ್ ನಾಯರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ಅಂತರಿಕ್ಷ್ ಹಾಗೂ ಮಲ್ಟಿ ಮೀಡಿಯಾ ಕಂಪನಿ ದೇವಾಸ್ ನಡುವಿನ ವ್ಯವಹಾರದಲ್ಲಿ 578 ಕೋಟಿ ರುಪಾಯಿ ವಂಚನೆ ಆರೋಪ ಮಾಡಿತ್ತು. 
ಇಸ್ರೋದ ಅಂಗಸಂಸ್ಥೆಯಾದ ಅಂತರಿಕ್ಷ್ ಮತ್ತು ದೇವಾಸ್ ಮಲ್ಟಿ ಮೀಡಿಯಾ ಎಂಬ ಖಾಸಗಿ ಸಂಸ್ಥೆ ನಡುವೆ ನಡೆದಿರುವ ಸ್ಪೆಕ್ಟ್ರಂ ಒಪ್ಪಂದದಿಂದ ಸರ್ಕಾರದ ಬೊಕ್ಕಸಕ್ಕೆ 2,00,000 ಕೋಟಿ ರುಪಾಯಿ ನಷ್ಟ ಸಂಭವಿಸಿದೆ ಎಂದು ಮಹಾಲೆಕ್ಕ ಪರಿಶೋಧಕ ಸಂಸ್ಥೆ(ಸಿಎಜಿ) ತಿಳಿಸಿತ್ತು. ಈ ಹಗರಣ ನಡೆದ ಸಂದರ್ಭದಲ್ಲಿ ಮಾಧವನ್ ಇಸ್ರೋದ ಅಧ್ಯಕ್ಷರಾಗಿದ್ದರು. 
SCROLL FOR NEXT