ಅರ್ನಿಯಾ; ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದೆ ಎಂದು ಶನಿವಾರ ತಿಳಿದುಬಂದಿದೆ.
ಮಧ್ಯರಾತ್ರಿಯಿಂದಲೇ ಪಾಕಿಸ್ತಾನ ಸೇನೆ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಗಡಿಯಲ್ಲಿ ಪಾಕಿಸ್ತಾನ ಹಾಗೂ ಭಾರತೀಯ ಸೇನೆ ನಡುವೆ ಬೆಳಿಗ್ಗೆ 6.45ರ ವರೆಗೂ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ನಿನ್ನೆ ಕೂಡ ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ಆರ್'ಎಸ್ ಪುರ ಸೆಕ್ಟರ್ ಬಳಿಯಿರುವ ಅಂತರಾಷ್ಟ್ರೀಯ ಗಡಿ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಪಾಕಿಸ್ತಾನ ಸೇನೆ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಕೆ ಕರ್ತವ್ಯ ನಿರತರಾಗಿದ್ದ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದರು. ಅಲ್ಲದೆ, ನಾಗರೀಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.