ಹತ್ಯೆಯಾದ ಬಾಲಕ ಪ್ರದ್ಯುಮನ್ ಠಾಕೂರ್
ನವದೆಹಲಿ: ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿರುವ ರಯಾನ್ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿ ಹತ್ಯೆ ಪ್ರಕರಣ ಸಂಬಂಧ ಬಾಲಕನ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು, ಆಘಾತ ಹಾಗೂ ಅತೀವ ರಕ್ತಸ್ರಾವವೇ ಪ್ರದ್ಯುಮನ್ ಠಾಕೂರ್ ಸಾವಿಗೆ ಕಾರಣ ಎಂದು ಹೇಳಲಾಗಿದೆ.
ಬಾಲಕ ಪ್ರದ್ಯುಮನ್ ದೇಹದ ಮೇಲೆ ಹರಿತವಾದ ಆಯುಧದಿಂದ ಇರಿಯಲಾಗಿದ್ದು, ಸಾಮಾನ್ಯ ಜನರ ಸಾವಿನಂತೆಯೇ ಬಾಲಕ ಕೂಡ ಸಾವನ್ನಪ್ಪಿದ್ದಾನೆಂದು ವರದಿಯಲ್ಲಿ ತಿಳಿಸಲಾಗಿದೆ.
ಈ ನಡುವೆ ಹೇಳಿಕೆ ನೀಡಿರುವ ಗುರುಗ್ರಾಮದ ಉಪ ಆಯುಕ್ತ ವಿನಯ್ ಪ್ರತಾಪ್ ಸಿಂಗ್ ಅವರು, ಸೋಮವಾರದಿಂದ ರಯಾನ್ ಇಂಟರ್ ನ್ಯಾಷನಲ್ ಶಾಲೆ ಎಂದಿನಂತೆ ತನ್ನ ಕಾರ್ಯನಿರ್ವಹಿಸಲಿದೆ. ಈಗಾಗಲೇ ಮಕ್ಕಳ ಸುರಕ್ಷತೆ ಬಗ್ಗೆ ಸಭೆ ನಡೆಸಲಾಗಿದ್ದು, ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಸೆ.8 ರಂದು ರಿಯಾನ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮನ್ ಠಾಕೂರ್ ಎಂಬ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರದ್ಯುಮನ್ ಕತ್ತು ಸೀಳಿದ್ದ ದುಷ್ಕರ್ಮಿಗಳು ಶಾಲೆಯ ಶೌಚಾಲಯದಲ್ಲಿ ದೇಹವನ್ನು ಬಿಸಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ನೋಡಿದ್ದ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದರು. ಬಳಿಕ ಶಾಲಾ ಆಡಳಿತ ಮಂಡಳಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ, ವೈದ್ಯರು ಬಾಲಕ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಪ್ರಕರಣಕ್ಕೆ ಬಾಲಕನ ಪೋಷಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದರು. ನಿನ್ನೆಯಷ್ಟೇ ಪ್ರಕರಣವನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು.