ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
ನವದೆಹಲಿ: ವಂಶಪಾರಂಪರ್ಯ ರಾಜಕೀಯ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಪ್ರಜಾಪ್ರಭುತ್ವದಲ್ಲಿ ವಂಶಪಾರಂಪರ್ಯ ಪಾಲನೆ ಅಸಹ್ಯ ಹುಟ್ಟಿಸುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ವಂಶಪಾರಂಪರ್ಯ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ವಂಶಪಾರಂಪರ್ಯ ಹಾಗೂ ಪ್ರಜಾಪ್ರಭುತ್ವ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ವಂಶಪಾರಂಪರ್ಯ ದೇಶದ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷವನ್ನು ಉದ್ದೇಶಿಸಿ ಹೇಳಿಕೆಯನ್ನು ನೀಡುತ್ತಿಲ್ಲ. ಇಂತಹ ವಿಚಾರಗಳ ಬಗ್ಗೆ ನಾನು ಈ ಹಿಂದೆಯೂ ದನಿಯನ್ನು ಎತ್ತುತ್ತಿದ್ದೆ. ಇದೀಗ ನಾನು ರಾಜಕೀಯದಿಂದ ಹೊರಗುಳಿದಿದ್ದೇನೆಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಮೆರಿಕಾದ ಬರ್'ಕ್ಲೆಯಲ್ಲಿನ ಪ್ರತಿಷ್ಠಿತ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗೆ ನಡೆಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ಹೆಚ್ಚಿನ ದೇಶಗಳಲ್ಲಿ ವಂಶಪಾರಂಪರ್ಯದ ಆಡಳಿತ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಕೂಡ ಅದು ಅಷ್ಟೇ ಸಾಮಾನ್ಯವಾಗಿದೆ.
ಭಾರತದಲ್ಲಿನ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ವಂಶಪಾರಂಪರ್ಯ ನಡೆಯುತ್ತಿದೆ. ಅಖಿಲೇಶ್ ಯಾದವ್, ಸ್ಟಾಲಿನ್ ಮತ್ತು ನಟ ಅಭಿಷೇಕ್ ಬಚ್ಚನ್ ಕೂಡ ಸಿನಿಮಾ ರಂಗದಲ್ಲಿ ಇದಕ್ಕೆ ಉದಾಹರಣೆಯಾಗಿದ್ದಾರೆ. ಅದುದರಿಂದ ವಂಶಪಾರಂಪರ್ಯದ ಬಗ್ಗೆ ಮಾತಾಡುವಾಗ ಕೇವಲ ನನ್ನನ್ನು ಗುರಿ ಮಾಡಬೇಕೆ ಎಂದು ಹೇಳಿದ್ದರು.