ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೇ ಇಲಾಖೆ ರೈಲುಗಳಲ್ಲಿನ ಅಧಿಕೃತ ನಿದ್ರಾವಧಿಯಲ್ಲಿ ಒಂದು ಗಂಟೆ ಕಡಿತ ಮಾಡಿದೆ.
ಸೀಟಿಗಾಗಿ ಪ್ರಯಾಣಿಕರ ನಡುವಿನ ಗೊಂದಲ ಹಾಗೂ ಗಲಾಟೆ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವ ಹಿನ್ನಲೆಯಲ್ಲಿ ತನ್ನ ವೇಳಾಪಟ್ಟಿಯಲ್ಲಿ ಬದಲಾವಣೆ ಮುಂದಾಗಿರುವ ಇಲಾಖೆ ತನ್ನ ಪ್ರಯಾಣಿಕರ ಅಧಿಕೃತ ನಿದ್ರಾವಧಿಯಲ್ಲಿ ಒಂದು ಗಂಟೆ ಕಡಿತ ಮಾಡಿದೆ. ಈ ಹಿಂದೆ ರೈಲು ಪ್ರಯಾಣಿಕರು ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೂ ನಿದ್ರಾವಧಿ ಎಂದು ಗುರುತಿಸಲಾಗಿತ್ತು. ಈ ವೇಳೆ ಪ್ರಯಾಣಿಕರು ಮೇಲಿನ ಮತ್ತು ಮಧ್ಯದ ಬರ್ತ್ ಗಳ ಮೇಲೆ ಮಲಗಲು ಅವಕಾಶವಿತ್ತು.
ಆದರೀಗ ಈ ಸಮಯ ಬದಲಾವಣೆಯಿಂದಾಗಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಮಾತ್ರ ಪ್ರಯಾಣಿಕರು ಮೇಲಿನ ಮತ್ತು ಮಧ್ಯದ ಬರ್ತ್ ಗಳಲ್ಲಿ ಮಲಗಬಹುದಾಗಿದೆ. ಈ ಬಗ್ಗೆ ಕಳೆದ ಆಗಸ್ಟ್ 31ರಂದೇ ಇಲಾಖೆ ಸುತ್ತೋಲೆ ಹೊರಡಿಸಿದ್ದು, ವಿಕಲಚೇತನ ಮತ್ತು ಅನಾರೋಗ್ಯ ಪೀಡಿತರಂತಹ ಕೆಲ ವಿಶೇಷ ಪ್ರಯಾಣಿಕರನ್ನು ಈ ಆದೇಶದಿಂದ ಹೊರಗಿಡಲಾಗಿದೆ ಎಂದು ಇಲಾಖೆಯ ವಕ್ತಾರ ಅನಿಲ್ ಸಕ್ಸೇನಾ ಹೇಳಿದ್ದಾರೆ.
ರಿಸರ್ವ್ ಕೋಚ್ ಗಳಲ್ಲಿ ಪ್ರಯಾಣಿಕರು ಮಲಗಲು ಅವಕಾಶವಿದ್ದು, ಮಧ್ಯ ಬರ್ತ್ ಗಳಲ್ಲಿರುವ ಪ್ರಯಾಣಿಕರು ಏಳದ ಹೊರತು ಕೆಳಗಿನ ಬರ್ತ್ ಗಳಲ್ಲಿರುವ ಪ್ರಯಾಣಿಕರು ಕುಳಿತುಕೊಳ್ಳಲು ಆಗುವುದಿಲ್ಲ. ಇದೇ ಕಾರಣಕ್ಕೆ ಇಲಾಖೆಗೆ ಹಲವು ದೂರುಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಈ ಸಮಸ್ಯೆ ಪರಿಹಾರಕ್ಕೆ ತಿಲಾಂಜಲಿ ಹಾಕಲು ಇಲಾಖೆ ನಿರ್ಧರಿಸಿದ್ದು, ಟಿಟಿಇಗಳ ಮೂಲಕ ಅಧಿಕೃತ ನಿದ್ರಾ ಸಮಯದಲ್ಲಿ ಮಾತ್ರ ಪ್ರಯಾಣಿಕರು ನಿದ್ರಿಸುವಂತೆ ಗಮನ ಹರಿಸಲು ಜವಾಬ್ದಾರಿ ನೀಡಲಾಗಿದೆ.