ದೇಶ

ರೊಹಿಂಗ್ಯಾ ನಿರಾಶ್ರಿತರಿಂದ ದೇಶದ ಭದ್ರತೆಗೆ ಅಪಾಯವಿದೆ: ಸುಪ್ರೀಂಕೋರ್ಟ್'ಗೆ ಕೇಂದ್ರ ಸರ್ಕಾರ

Manjula VN
ನವದೆಹಲಿ: ರೊಹಿಂಗ್ಯಾ ಮುಸ್ಲಿಮರ ಗಡಿಪಾರು ಪ್ರಕರಣ ಕುರಿತಂತೆ ಸುಪ್ರೀಂಕೋರ್ಟ್'ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ರೊಹಿಂಗ್ಯಾ ನಿರಾಶ್ರಿತರಿಂದ ದೇಶದ ಭದ್ರತೆಗೆ ಗಂಭೀರ ಅಪಾಯವಿದೆ ಎಂದು ಸೋಮವಾರ ಹೇಳಿದೆ. 
ರೊಹಿಂಗ್ಯಾ ನಿರಾಶ್ರಿತರಿಂದ ದೇಶದ ಭದ್ರತೆಗೆ ಗಂಭೀರವಾದ ಅಪಾಯವಿದ್ದು, ಈ ಬಗ್ಗೆ ವಿವರವಾಗಿ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಬೇಕಿದೆ ಎಂದು ಸುಪ್ರೀಂಕೋರ್ಟ್'ಗೆ ಕೇಂದ್ರ ತಿಳಿಸಿದೆ. 
ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ 15 ಪುಟಗಳ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ರೊಹಿಂಗ್ಯಾ ಮುಸ್ಲಿಮರು ಪಾಕಿಸ್ತಾನ ಮೂಲದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಯೊಂದಿಗೆ  ನಂಟು ಹೊಂದಿದೆ. 
ಮ್ಯಾನ್ಮಾರ್, ಪಶ್ಚಿಮ ಬಂಗಾಳ, ತ್ರಿಪುರ ಗಳಲ್ಲಿ ರೊಹಿಂಗ್ಯಾ ವಲಸಿಗರು ತಮ್ಮ ಅಕ್ರಮ ಚಟುವಟಿಕೆಗಳನ್ನು ನಡೆಸಲು ಅನುಕೂಲಕರವಾಗಲೆಂದು ಸಂಘಟಿತ ಸಂಪರ್ಕಗಳು ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ವಿವರಣಾತ್ಮಕವಾಗಿ ಪ್ರತಿಕ್ರಿಯೆ ನೀಡಲು ಅ.3 ರವರೆಗೂ ಸರ್ಕಾರಕ್ಕೆ ಕಾಲಾವಕಾಶದ ಅಗತ್ಯವಿದೆ ಎಂದು ಸುಪ್ರೀಂ ಬಳಿ ಕೇಂದ್ರ ಮನವಿ ಮಾಡಿಕೊಂಡಿದೆ. 
ಮ್ಯಾನ್ಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ವಿಶ್ವದಾದ್ಯಂತ ಖಂಡನೆಗಳು ವ್ಯಕ್ತವಾಗತೊಡಗಿವೆ. 
ಈ ಹಿಂದೆ ರೊಹಿಂಗ್ಯಾ ಮುಸ್ಲಿಮರ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ಮುಖ್ಯಸ್ಥ ಝೀದ್ ರಹದ್ ಅಲ್ ಹುಸೇನ್ ಅವರು, ಭಾರತದಲ್ಲಿರುವ ರೊಹಿಂಗ್ಯಾ ಮುಸ್ಲಿಮರನ್ನು ಸಾಮೂಹಿಕ ಬಹಿಷ್ಕಾರ ಹಾಕುವ ಕುರಿತು ಮಾತುಗಳು ಕೇಳಿಬರುತ್ತಿವೆ. ಆದರೆ ಭಾರತವು ಸಾಮೂಹಿಕ ಬಹಿಷ್ಕಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ, ಅಥವಾ ಜನರು ಚಿತ್ರಹಿಂಸೆ ಅಥವಾ ಇತರ ಗಂಭೀರ ಉಲ್ಲಂಘನೆಗಳನ್ನು ಎದುರಿಸುವ ಸ್ಥಳಕ್ಕೆ ಮರಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
SCROLL FOR NEXT