ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಯೋಗಿ ಆದಿತ್ಯನಾಥ್ ಜೊತೆಗೆ ಉಪ ಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಕೂಡ ಪರಿಷತ್ ಸಭಾಪತಿ ರಮೇಶ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಲಕ್ನೋದಲ್ಲಿರುವ ಶಾಸನಸಭೆ ಕಟ್ಟಡದ ತಿಲಕ್ ಹಾಲ್ ನಲ್ಲಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಚಿವರುಗಳಾದ ಸ್ವತಂತ್ರ್ಯ ದೇವ್ ಸಿಂಗ್ ಮತ್ತು ಮೋಹ್ಸಿನ್ ರಾಜಾ ಅವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು, ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಆರು ತಿಂಗಳ ಒಳಗಾಗಿ ವಿಧಾನ ಸಭೆ ಅಥವಾ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಜನಾದೇಶ ಪಡೆಯಬೇಕೆಂಬ ಕಾನೂನಿನ್ವಯ ಯೋಗಿ ಆದಿತ್ಯ ನಾಥ್ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.