ಥಾಣೆ: ಹಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ಇಕ್ಬಾಲ್ ಕಾಸ್ಕರ್ ನ ಇಬ್ಬರು ಸಹಚರರನ್ನು ಮಂಗಳವಾರ ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2013ರಿಂದ ದಾವೂದ್ ಹೆಸರಿನಲ್ಲಿ ಥಾಣೆಯ ಬಿಲ್ಡರ್ ಒಬ್ಬರಿಗೆ ಬೆದರಿಕೆ ಹಾಕಿ 30 ಲಕ್ಷ ರುಪಾಯಿ ಹಾಗೂ ನಾಲ್ಕು ಫ್ಲಾಟ್ ಗಳನ್ನು ಸುಲಿಗೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕಸ್ಕರ್ ಸಹಚರರಾದ ಮುಮ್ತಾಜ್ ಶೇಕ್ ಮತ್ತು ಇಸ್ರಾರ್ ಅಲಿ ಜಮಿಲ್ ಸಯೀದ್ ರನ್ನು ಬಂಧಿಸಲಾಗಿದೆ ಎಂದು ಥಾಣೆ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಹೇಳಿದ್ದಾರೆ.
ಹಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಸಹೋದರಿ ಹನೀನಾ ಪರ್ಕರ್ ಸಂಬಂಧಿ ಇಖ್ಬಾಲ್ ಪರ್ಕರ್ ನ್ನು ಹಾಗೂ ಡ್ರಗ್ ಡೀಲರ್ ಮೊಹಮ್ಮದ್ ಯಾಸಿನ್ ಖ್ವಾಜಾ ಹುಸೇನ್ ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಇದೇ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಕಸ್ಕರ್ ನನ್ನು ಮುಂಬೈನ ನಾಗಪಾಡದ ಆತನ ನಿವಾಸದಲ್ಲಿ ಬಂಧಿಸಿದ್ದರು. ಕಳೆದ ತಿಂಗಳು ಠಾಣೆಯ ಎಇಸಿ ಘಟಕದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಎನ್‌ಕೌಂಟರ್ ಖ್ಯಾತಿಯ ಪ್ರದೀಪ್ ಶರ್ಮಾ ನೇತೃತ್ವದ ತಂಡ ಕಸ್ಕರ್ ನನ್ನು ಬಂಧಿಸಿತ್ತು.
ಮುಂಬೈನ ನಗ್ಪದಾ ಪ್ರದೇಶದಲ್ಲಿ ವಾಸಿಸುವ ಇಕ್ಬಾಲ್ ಉದ್ಯಮಿಗಳಿಗೆ ಸಹೋದರ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ದೊಡ್ಡ ಮೊತ್ತದ ಹಣ ನೀಡುವಂತೆ ಬೆದರಿಸುತ್ತಿದ್ದ. ಇದಕ್ಕೆ ಹೆದರಿದ, ಠಾಣೆ, ಉಲ್ಲಾಸ್‌ನಗರ, ದೊಂಬಿವಿಲಿಯ ಅನೇಕ ಬಿಲ್ಡರ್‌ಗಳು ದೊಡ್ಡದ ಮೊತ್ತದ ಹಣವನ್ನು ಕಸ್ಕರ್‌ಗೆ ಪಾವತಿಸಿದ್ದರು. ಇತ್ತೀಚಿಗೆ ನೋಟು ಅಪನಗದೀಕರಣದಿಂದ ದೊಡ್ಡ ಮೊತ್ತದ ಸಾಲ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಒಬ್ಬ ಬಿಲ್ಡರ್, ಕಸ್ಕರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಕಸ್ಕರ್ ನನ್ನು ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ.