ದೇಶ

ಮಾಲೆಗಾಂವ ಸ್ಫೋಟ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳಿಗೆ ಜಾಮೀನು

Lingaraj Badiger
ಮುಂಬೈ: 2008 ಮಾಲೆಗಾಂವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಮತ್ತೆ ಇಬ್ಬರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ವಿಶೇಷ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಪ್ರಮುಖ ಆರೋಪಿ ಲೆ.ಕರ್ನಲ್ ಪ್ರಸಾದ್ ಪುರೋಹಿತ್ ಹಾಗೂ ಸಾದ್ವಿ ಪ್ರಗ್ಯಾ ಸಿಂಗ್ ಥಾಕೂರ್ ನಂತರ ಮತ್ತಿಬ್ಬರೂ ಆರೋಪಿಗಳಾದ ಸುಧಾಕರ್ ಚತುರ್ವೇದಿ ಹಾಗೂ ಸುಧಾಕರ್ ದ್ವಿವೇದಿ ಅವರಿಗೆ ಈಗ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಇದರೊಂದಿಗೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ 14 ಆರೋಪಿಗಳ ಪೈಕಿ 11 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇನ್ನು ಕೇವಲ ಮೂವರು ಮಾತ್ರ ಜೈಲು ಹಕ್ಕಿಗಳಾಗಿದ್ದಾರೆ.
ಎಂಟು ವರ್ಷಗಳ ನಂತರ ಲೆ.ಕರ್ನಲ್ ಪುರೋಹಿತ್ ಅವರು ಕಳೆದ ಆಗಸ್ಟ್ 23ರಂದು ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದಿದ್ದರು. ಇದಕ್ಕೂ ಮುನ್ನ ಮತ್ತೊಬ್ಬ ಆರೋಪಿ ಪ್ರಗ್ಯಾ ಸಿಂಗ್ ಥಾಕೂರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.
ಸೆಪ್ಟೆಂಬರ್ 29, 2008ರಲ್ಲಿ ಮಾಲೆಗಾಂವನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಅಲ್ಲದೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
SCROLL FOR NEXT