ಕೌಶಲೇಂದ್ರ ಪ್ರಪನಾಚಾರ್ಯ ಪಲಾಹರಿ ಮಹಾರಾಜ್
ರಾಜಸ್ತಾನ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ರಾಜ್ಯದ ಪ್ರಸಿದ್ಧ ಸಂತರಲ್ಲಿ ಒಬ್ಬರಾಗಿರುವ ಕೌಶಲೇಂದ್ರ ಪ್ರಪನಾಚಾರ್ಯ ಪಲಾಹರಿ ಮಹಾರಾಜ್ ಅವರನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಬಿಲಾಸ್ಪುರದ 21 ವರ್ಷದ ಯುವತಿ ಬಾಬಾ ವಿರುದ್ದ ಕೆಲ ದಿನಗಳ ಹಿಂದಷ್ಟೇ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಬಾಬಾ ವಿರುದ್ದ ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಬಾಬಾರಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ಸದಸ್ಯರ ವೈದ್ಯಕೀಯ ತಂಡ ಬಾಬಾರನ್ನು ಪರೀಕ್ಷೆ ನಡೆಸಿದ್ದಾರೆಂದು ಅರವಳಿ ಪೊಲೀಸ್ ಠಾಣಾಧಿಕಾರಿ ಹೇಮರಾಜ್ ಮೀನಾ ಅವರು ತಿಳಿಸಿದ್ದಾರೆ.
ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಂತೆಯೇ ತನಿಖೆ ಆರಂಭಿಸಿದ್ದ ಅಧಿಕಾರಿಗಳಿಗೆ, ಆಶ್ರಮದ ಕೋಣೆಯೊಂದರಲ್ಲಿ ಮಹಿಳೆಯರ ಆಭರಣಗಳು ದೊರಕಿದ್ದವು. ಶೋಧ ಕಾರ್ಯಾಚರಣೆ ವೇಳೆ ಲ್ಯಾಪ್ ಟಾಪ್ ಹಾಗೂ ಸಿಡಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗುತ್ತಿದೆ.
ಯುವತಿ ಜೈಪುರದಲ್ಲಿ ಕಾನೂನು ಪದವಿ ಮಾಡುತ್ತಿದ್ದು, ಆಕೆಯ ಪೋಷಕರು ಫಲಹಾರಿ ಮಹಾರಾಜ್ ಬಾಬಾರ ಭಕ್ತರಾಗಿದ್ದರು. ರಾಜಧಾನಿ ದೆಹಲಿಯಲ್ಲಿ ಹಿರಿ ವಕೀಲರ ಅಡಿಯಲ್ಲಿ ತರಬೇತಿ ಪಡೆದಿದ್ದ ಯುವತಿ ರೂ.3,000 ಹಣವನ್ನು ಸಂಪಾದಿಸಿದ್ದಳು. ಇದರಂತೆ ಮೊದಲ ವೇತನವನ್ನು ಬಾಬಾಗೆ ನೀಡುವಂತೆ ಪೋಷಕರು ಯುವತಿಗೆ ತಿಳಿಸಿದ್ದಾರೆ.
ಪೋಷಕರ ಸೂಚನೆಯಂತೆಯೇ ಯುವತಿ ರಕ್ಷಾ ಬಂಧನದ ದಿನದಂದು ಆಶ್ರಮಕ್ಕೆ ಭೇಟಿ ನೀಡಿದ್ದಾಳೆ. ಈ ವೇಳೆ ಬಾಬಾ ಗ್ರಹಣವಿರುವುದರಿಂದ ರಾತ್ರಿ ಆಶ್ರಮದಲ್ಲಿಯೇ ಇರುವಂತೆ ತಿಳಿಸಿದ್ದಾರೆ. ಬಳಿಕ ರಾತ್ರಿ ಯುವತಿಯನ್ನು ಕೊಠಡಿ ಕರೆದುಕೊಂಡು ಹೋಗಿರುವ ಬಾಬಾ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಇದೀಗ ಬಾಬಾ ಫಲಹಾರಿ ಮಹಾರಾಜ್'ರನ್ನು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics