ನವದೆಹಲಿ: ದೇಶದಿಂದ ಸೊಳ್ಳೆಗಳನ್ನು ಓಡಿಸಿ ಎಂದು ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದಕ್ಕೆ, ನೀವೇನು ನಮ್ಮಲ್ಲಿ ಕೇಳುತ್ತಿದ್ದೀರಿ, ಅದನ್ನು ದೇವರು ಮಾತ್ರ ಮಾಡಲು ಸಾಧ್ಯ. ದೇವರು ಮಾಡುವ ಕೆಲಸವನ್ನು ನಮ್ಮಲ್ಲಿ ಮಾಡಿಕೊಡಿ ಎಂದು ಕೇಳಬೇಡಿ, ನಾವು ದೇವರಲ್ಲ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರುಗಳು ಹೇಳಿದ ಪ್ರಸಂಗ ನಡೆದಿದೆ.
ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ, ದೇಶದಲ್ಲಿರುವ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಸೊಳ್ಳೆಗಳಿವೆ, ಅವು ತೊಂದರೆ ಕೊಡುತ್ತವೆ, ಅವುಗಳನ್ನು ಓಡಿಸಬೇಕು ಎಂದು ನಿರ್ದೇಶನ ನೀಡಲು ಕೋರ್ಟಿಗೆ ಸಾಧ್ಯವಿಲ್ಲ ಎಂದು ಹೇಳಿದೆ.
ಧನೇಶ್ ಲೆಶ್ದಾನ್ ಎಂಬುವವರು ದೇಶದಲ್ಲಿರುವ ಸೊಳ್ಳೆಗಳನ್ನು ಒದ್ದೋಡಿಸಿ ಎಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಅರ್ಜಿ ಸಲ್ಲಿಸುವುದಕ್ಕೆ ಒಂದು ವಿಧಾನವೆಂಬುದಿದೆ ಎಂದು ಹೇಳಿದೆ.
ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅಳವಡಿಸಬೇಕೆಂದು ಅರ್ಜಿಯಲ್ಲಿ ಧನೆಶ್ ಒತ್ತಾಯಿಸಿದ್ದರು. ಆದರೆ ದೇಶದಿಂದ ಸೊಳ್ಳೆಗಳನ್ನು ಓಡಿಸಲು ಅಧಿಕಾರಿಗಳಿಗೆ ಆದೇಶ ನೀಡಲು ಯಾವುದೇ ಕೋರ್ಟ್ ಗೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸೊಳ್ಳೆಗಳಿಂದ ಜನರ ಜೀವಕ್ಕೆ ಅಪಾಯವಾದರೆ ಮತ್ತು ಜೀವ ಕಳೆದುಕೊಂಡರೆ ಸರ್ಕಾರಿ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕು ಎಂದು ಕೂಡ ದನೆಶ್ ಒತ್ತಾಯಿಸಿದ್ದರು. 2015ರ ಕೇಸನ್ನು ನೆನಪಿಸಿದ ಅರ್ಜಿದಾರರು ಇಂತಹದೇ ಕೇಸನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಆದರೆ ನಂತರ ದೆಹಲಿ ಮತ್ತು ಇತರೆಡೆಗಳಲ್ಲಿ ಡೆಂಗ್ಯು ಮತ್ತಿತರ ಸೊಳ್ಳೆ ಸಂಬಂಧಿ ರೋಗಗಳ ಬಗ್ಗೆ ಜಾಗ್ರತೆ ವಹಿಸುವ ಕುರಿತು ಸ್ವತಃ ಆದೇಶ ನೀಡಿತ್ತು ಎಂದು ಅರ್ಜಿಯಲ್ಲಿ ವಿವರಿಸಿದ್ದರು.
ವಿಶ್ವ ಆರೋಗ್ಯ ಸಂಘಟನೆ ಅಂಕಿಅಂಶ ಪ್ರಕಾರ ಸೊಳ್ಳೆಗಳು ಕಚ್ಚಿ ರೋಗ ಹರಡಿ ವಿಶ್ವದಲ್ಲಿ ಸುಮಾರು 7,25,000 ಮಂದಿ ಮೃತಪಟ್ಟಿದ್ದಾರೆ.