ಹನಿಪ್ರೀತ್ ಹಾಗೂ ರಾಮ್ ರಹೀಂ ಸಿಂಗ್
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅವರ ದತ್ತು ಪುತ್ರಿ ಎನ್ನಲಾಗುತ್ತಿರುವ ಹನಿಪ್ರೀತ್ ಇನ್ಸಾನ್ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ಆದರೆ ಆರೋಪಿ ಶರಣಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.
ನಿರೀಕ್ಷಣಾ ಜಾಮೀನು ಕೋರಿ ಹನಿಪ್ರೀತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಗೀತಾ ದಿಂಗ್ರಾ ಸೆಹಗಲ್ ಅವರು, ಆರೋಪಿ ಪರ ವಕೀಲರ ಹಾಗೂ ದೆಹಲಿ-ಹರಿಯಾಣ ಪೊಲೀಸರ ವಾದ ಪ್ರತಿವಾದ ಆಲಿಸಿದ ಬಳಿಕ ತಾವು ಆದೇಶ ನೀಡಬಹುದು. ಆದರೆ ಶರಣಾಗುವುದೇ ನಿಮಗೆ ಸುಲಭವಾದ ಮಾರ್ಗ ಎಂದು ತಲೆಮರೆಸಿಕೊಂಡಿರುವ ಹನಿಪ್ರೀತ್ ಹೇಳಿದ್ದಾರೆ.
ರಾಮ್ ರಹೀಂ ಸಿಂಗ್ ಜೈಲು ಪಾಲಾದ ನಂತರ ಹನಿಪ್ರೀತ್ ತಲೆ ಮರೆಸಿಕೊಂಡಿದ್ದು, ಆಕೆಗಾಗಿ ದೆಹಲಿ ಮತ್ತು ಹರಿಯಾಣ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ಕೋರ್ಟ್ ತೀರ್ಪು ನೀಡಿದ ಬಳಿಕ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹನಿಪ್ರೀತ್ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.