ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ನವದೆಹಲಿ: ಡಾರ್ಜಿಲಿಂಗ್ ಹಿಂಸಾಚಾರ ಪ್ರಕರಣ ಸಂಬಂಧಿಸಿದಂತೆ ಪ್ರತಿಭಟನೆಗಳನ್ನು ಹಿಂಪಡೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾತುಕತೆ ಬರುವಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಮನವಿ ಮಾಡಿದ್ದಾರೆ.
ಡಾರ್ಜಿಲಿಂಗ್ ಹಿಂಸಾಚಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಮಾತುಕತೆ ಮೂಲಕವಷ್ಟೇ ಯಾವುದೇ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಸಂಯಮ, ಕಾನೂನಿನ ಚೌಕಟ್ಟಿನೊಳಗಿನ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ ಡಾರ್ಜಿಲಿಂಗ್ ನಂತಹ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸುವಂತೆ ಕೇಂದ್ರ ಗೃಹ ಕಾರ್ಯದರ್ಶಇ ರಾಜೀವ್ ಗೌಬಾ ಅವರಿಗೆ ಸೂಚನೆ ನೀಡಿದ್ದಾರೆ.
ಡಾರ್ಜಿಲಿಂಗ್ ನಲ್ಲಿ ಇಂದು ನಡೆಯುತ್ತಿರುವ ಹಿಂಸಾಚಾರಗಳನ್ನು ಕಂಡು ಸಾಕಷ್ಟು ನೋವಾಗಿದೆ. ಡಾರ್ಜಿಲಿಂಗ್ ನಲ್ಲಿ ಮತ್ತೆ ಶಾಂತಿಯುತ ವಾತಾವರಣ ಮರುಕಳಿಸಲು ಪ್ರತಿಭಟನೆ ಹಾಗೂ ಬಂದ್ ಗಳನ್ನು ಹಿಂದಕ್ಕೆ ಪಡೆಯುವಂತೆ ಈ ಮೂಲಕ ಜಿಜೆಎಂ ಮತ್ತು ಅದರ ನಾಯಕ ಬಿಮಾರ್ ಗುರುಂಗ್ ಅವರಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ತಿಳಿಸಿದ್ದಾರೆ.
ಪ್ರತ್ಯೇಕ ಗೋರ್ಖಾ ರಾಜ್ಯಕ್ಕಾಗಿ ಆಗ್ರಹಿಸಿ ಗೋರ್ಖಾ ಜನಮುಖಿ ಮೋರ್ಚಾ ಸಂಘಟನೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿತ್ತು. ಹಲವು ದಿನಗಳಿಂದ ನಡೆದ ಪ್ರತಿಭಟನೆ ಹಿಂಸಾಚಾರದಲ್ಲಿ ಈವರೆಗೂ 11 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಹಲವು ಮಂದಿ ಗಾಯಗೊಂಡಿದ್ದಾರೆ.