ದೇಶ

ಮಲಯಾಳಂ ನಟಿ ಅಪಹರಣ ಪ್ರಕರಣ: ನಟ ದಿಲೀಪ್ ನ್ಯಾಯಾಂಗ ಬಂಧನ ಅ.12ರ ವರೆಗೆ ವಿಸ್ತರಣೆ

Lingaraj Badiger
ಕೊಚ್ಚಿ: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಖ್ಯಾತ ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಲೆಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಂಗಮಲ್ಯ ಕೋರ್ಟ್ ಅಕ್ಟೋಬರ್ 12ರ ವರೆಗೆ ಗುರುವಾರ ವಿಸ್ತರಣೆ ಮಾಡಿದೆ.
ಸದ್ಯ ಅಲುವ ಉಪ ಕಾರಾಗೃಹದಲ್ಲಿರುವ ದಿಲೀಪ್ ಅವರನ್ನು ಇಂದು ಕೋರ್ಟ್ ಗೆ ಹಾಜರುಪಡಿಸುವ ಬದಲು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸಿ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಟಿ ಅಪಹರಣಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ದಿಲೀಪ್ ಅವರನ್ನು ಕಳೆದ ಜುಲೈ 10ರಂದು ಬಂಧಿಸಲಾಗಿದ್ದು, ಇತ್ತೀಚಿಗಷ್ಟೇ ನಾಲ್ಕನೇ ಬಾರಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಂಗಮಲ್ಯ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಆರೋಪಿ 60 ದಿನ ಜೈಲಿನಲ್ಲಿ ಕಳೆದಿದ್ದರೂ ಕಾನೂನು ಬದ್ಧ ಜಾಮೀನಿಗೆ ಅರ್ಹತೆ ಹೊಂದಿಲ್ಲ ಎಂದು ಹೇಳಿತ್ತು. ಈ ಹಿಂದೆ ಇದೇ ಕೋರ್ಟ್ ಮಲೆಯಾಳಂ ನಟನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ ಕೇರಳ ಹೈಕೋರ್ಟ್ ಎರಡು ಬಾರಿ ದಿಲೀಪ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಈಗ ಮತ್ತೆ ಮೂರನೇ ಬಾರಿ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನು ಫೆ.23ರಂದು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣ ಸಂಬಂಧ ನಟ ದಿಲೀಪ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಸುನಿಲ್ ಸೇರಿದಂತೆ ಇನ್ನಿತರೆ ಆರೋಪಿಗಳ ವಿರುದ್ಧ ಕೇರಳ ಪೊಲೀಸರು ಐಪಿಸಿ ಸೆಕ್ಸನ್ 342 (ಅಕ್ರಮ ಬಂಧನ), 366 (ಅಪಹರಣ ಅಥವಾ ಮಹಿಳೆಯ ಅಪಹರಣ), 376 (ಅತ್ಯಾಚಾರ, 506 (1) ಮತ್ತು 120 (ಬಿ) (ವಂಚನೆ)) ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
SCROLL FOR NEXT