ನವದೆಹಲಿ: ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ನಾಗಾ ಬಂಡುಕೋರರ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿದೆ ಎಂಬ ಸರ್ಕಾರದ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೂ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದೆ.
ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ಹೇಳಿಕೆ ಬಗ್ಗೆ ಮಾತನಾಡಿದ್ದು, ಸರ್ಕಾರಕ್ಕೆ ಸಂಕಷ್ಟದ ಸಂದರ್ಭ ಎದುರಾದಾಗಲೆಲ್ಲಾ ಅವರು ಒಂದೊಂದು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಗಡಿ ಪ್ರದೇಶದಲ್ಲಿ ನಮ್ಮ ಪಡೆಗಳು ಹಾಗೂ ಶತ್ರು ಪಡೆಗಳ ನಡುವೆ ಗುಂಡಿನ ದಾಳಿ ನಡೆಯುತ್ತಲೇ ಇರುತ್ತದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ನಾನು ಗೃಹ ಸಚಿವನಾಗಿದ್ದಾಗಲೂ ಸಹ ಇಂತಹ ಘಟನೆಗಳು ನಡೆದಿತ್ತು. ನನಗಿಂತ ಹಿಂದೆ ಗೃಹ ಸಚಿವರಾಗಿದ್ದ ಎಲ್.ಕೆ ಅಡ್ವಾಣಿ ಅವರನ್ನು ಕೇಳಿದರೆ ಅವರೂ ಇದನ್ನೇ ಹೇಳುತ್ತಾರೆ. ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರನ್ನು ಕೇಳಿದರೆ ಅವರೂ ಇದನ್ನೇ ಹೇಳುತ್ತಾರೆ. ಆದರೆ ಈ ಸರ್ಕಾರಕ್ಕೆ ಸಂಕಷ್ಟದ ಸಮಯ ಬಂದಾಗಲೆಲ್ಲಾ ಅವರಿಗೆ ಎಲ್ಲಾದರೂ ಒಂದು ಕಡೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗುತ್ತದೆ, ಎನ್ ಡಿಎ ಸರ್ಕಾರ ಬಂದ ನಂತರ ಈ ದೇಶದಲ್ಲಿ ಪ್ರತಿಯೊಂದೂ ಸರ್ಜಿಕಲ್ ಸ್ಟ್ರೈಕ್ ಆಗಿದೆ ಎಂದು ಚಿದಂಬರಂ ಹೇಳಿದ್ದಾರೆ.