ದೇಶ

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: 22 ಸಾವು, 30 ಜನರಿಗೆ ಗಾಯ

Manjula VN

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಎಲ್'ಫಿನ್'ಸ್ಟೋನ್ ರೈಲ್ವೇ ನಿಲ್ದಾಣದ ಬಳಿ ಕಾಲ್ತುಳಿತ ಉಂಟಾಗಿದ್ದು, ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ. 

ಮುಂಬೈನಲ್ಲಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮಳೆ ಬಳಿಕ ಇಂದು ಬೆಳಿಗ್ಗೆ 10.30 ಸುಮಾರಿಗೆ ಎಲ್'ಫಿನ್ ಸ್ಟೋನ್ ರೈಲ್ವೇ ನಿಲ್ದಾಣದ ಬಳಿಯಿರುವ ಪಾದಚಾರಿಗಳ ಮೇಲ್ಸೇತುವೆ ಬಳಿ ಕಾಲ್ತುಳಿತ ಉಂಟಾಗಿದೆ. ಪರಿಣಾಮ ಸ್ಥಳದಲ್ಲಿ 22 ಮಂದಿ ಸಾವನ್ನಪ್ಪಿ, 30 ಮಂದಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಘಟನೆ ಬಳಿಕ ವೈದ್ಯಕೀಯ ತಂಡ ಹಾಗೂ ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಧಾರಾಕಾರ ಮಳೆಯಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ಪಶ್ಚಿಮ ರೈಲ್ವೇ ಅಧಿಕಾರಿಗಳು ಹೇಳಿಕೊಂಡಿದ್ದಾರೆ. 

ಲೋಕಲ್ ರೈಲು ನಿಲ್ದಾಣದಿಂದ ಪ್ರಯಾಣಿಕರು ಮೇಲ್ಸೇತುವೆ ಮೂಲಕ ನಡೆದುಕೊಂಡು ಹೊರ ಹೋಗುತ್ತಿದ್ದ ವೇಳೆ ಕಾಲ್ತುಳಿತ ಉಂಟಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ಪ್ರತ್ಯಕ್ಷದರ್ಶಿಯೊಬ್ಬರು, ಮಳೆಯಿಂದಾಗಿ ಸ್ಥಳದಲ್ಲಿ ಸಾಕಷ್ಟು ಸಂಚಾರ ದಟ್ಟಣೆ ಇತ್ತು. ಈ ವೇಳೆ ಮೇಲ್ಸೇತುವೆ ಕುಸಿದು ಬೀಳಲಿದೆ ಎಂಬ ವದಂತಿಗಳು ಹಬ್ಬಿದ್ದವು. ಮೊದಲು ಮೂವರು ಮಹಿಳೆಯರನ್ನು ಕೆಳಗೆ ತಳ್ಳಲಾಗಿತ್ತು. ಬಳಿಕ ಒಬ್ಬರಾದ ಮೇಲೆ ಒಬ್ಬರು ಕೆಳಗೆ ಬೀಳಲು ಆರಂಭವಾಗಿತ್ತು. ಇದರಂತೆ ಸ್ಥಳದಲ್ಲಿ ಕಾಲ್ತುಳಿತ ಎದುರಾಗಿತ್ತು ಎಂದು ಹೇಳಿಕೊಂಡಿದ್ದಾರೆ. 
SCROLL FOR NEXT